ತುಮಕೂರು, ಏ 28 (DaijiworldNews/DB): ರಾಜ್ಯದಲ್ಲಿ ಬದಲಾವಣೆಗಾಗಿ ಜನ ಜೆಡಿಎಸ್ಗೆ ಆಶೀರ್ವಾದ ಮಾಡಬೇಕು. ಚುನಾವಣೆ ನಂತರದ ಐದು ವರ್ಷಗಳಲ್ಲಿ ನಾವು ಹೇಳಿದ ಯೋಜನೆಗಳನ್ನು ಪೂರ್ತಿಗೊಳಿಸದೇ ಇದ್ದಲ್ಲಿ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುವ ಸವಾಲನ್ನು ನಾವು ಸ್ವೀಕರಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.
ತುಮಕೂರು ತಾಲೂಕಿನ ಹೆಬ್ಬೂರಿನಲ್ಲಿ ಗುರುವಾರ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸವಾಲಿನಲ್ಲಿ ವಿಫಲರಾದರೆ ಮತ್ತೆಂದೂ ಮತ ಕೇಳಲು ನಿಮ್ಮ ಬಳಿ ಬರುವುದಿಲ್ಲ ಎಂದರು.
ಕೊರೊನಾ ಕಷ್ಟಕಾಲದಲ್ಲಿ ನಾವು ಸುಮ್ಮನೆ ಕೂರದೆ ಜನರ ಎಲ್ಲಾ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇವೆ. ಶಿಕ್ಷಣ, ಆರೋಗ್ಯ, ನೀರಾವರಿ ಸೇರಿದಂತೆ ಹಲವು ಯೋಜನೆಗಳನ್ನು ಮಾಡಿದ್ದೇವೆ. ಎಲ್ಕೆಜಿಯಿಂದ ಪಿಯುಸಿವರೆಗೆ ಉಚಿತ ಶಿಕ್ಷಣವನ್ನೂ ಕೊಡುತ್ತೇವೆ. ರಾಜ್ಯದ ಆರು ಸಾವಿರ ಗ್ರಾಮ ಪಂಚಾಯತ್ ಮಟ್ಟದಲ್ಲಿ ಉಚಿತ ಆರೋಗ್ಯ ಸೇವೆ ನೀಡುತ್ತೇವೆ. ದಿನವಿಡೀ ವೈದ್ಯರ ಲಭ್ಯತೆ ಗ್ರಾಮ್ಯ ಮಟ್ಟದಲ್ಲಿಯೂ ಇರುವಂತೆ ಮಾಡುತ್ತೇವೆ. ಇದೆಲ್ಲಾ ಸಾಧ್ಯವಾಗಬೇಕಾದರೆ ಜನರ ಆಶೀರ್ವಾದ ಬೇಕು. ಜನಾಶೀರ್ವಾದದಿಂದ ಜೆಡಿಎಸ್ ಅಧಿಕಾರಕ್ಕೆ ಬಂದರೆ ನೀಡಿದ ಎಲ್ಲಾ ವಾಗ್ದಾನಗಳನ್ನು ಪೂರೈಸುತ್ತೇವೆ ಎಂದವರು ತಿಳಿಸಿದರು.
ಈ ಯೋಜನೆಗಳ ಜಾರಿಗೆ ನಾವು ಎಂದೂ ಬದ್ದರಾಗಿದ್ದೇವೆ. ಒಂದು ವೇಳೆ ಜಾರಿಗೊಳಿಸದೇ ಇದ್ದಲ್ಲಿ ಮುಂದೆ ಯಾವತ್ತೂ ಜೆಡಿಎಸ್ ಮತ ಯಾಚಿಸಿ ನಿಮ್ಮ ಬಳಿ ಬರುವುದಿಲ್ಲ. ಅಲ್ಲದೆ, ಪಕ್ಷವನ್ನೇ ವಿಸರ್ಜನೆ ಮಾಡುತ್ತೇವೆ ಎಂದರು.