ಬೆಂಗಳೂರು, ಏ 28 (DaijiworldNews/DB): ಪೆಟ್ರೋಲಿಯಂ ಉತ್ಪನ್ನಗಳ ವ್ಯಾಟ್ ದರ ಕಡಿಮೆ ಮಾಡುವ ಮೂಲಕ ರಾಜ್ಯದ ಕಾಮನ್ ಮ್ಯಾನ್ ಮುಖ್ಯಮಂತ್ರಿಯವರು ಜನರ ಮೇಲಿನ ಹೊರೆಯನ್ನು ತಗ್ಗಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲು ಸಿಎಂ ಬೊಮ್ಮಾಯಿಯವರನ್ನು ಪ್ರಶಂಸಿದ್ದಾರೆ.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಪ್ರಧಾನಿ ಮೋದಿ ಕರೆಗೆ ಕರ್ನಾಟಕ ಸರ್ಕಾರವು ತತ್ಕ್ಷಣ ಸ್ಪಂದಿಸಿ ವ್ಯಾಟ್ ದರ ಕಡಿಮೆ ಮಾಡಿದೆ. ಇದರಿಂದ ಸರ್ಕಾರದ ಖಜಾನೆಗೆ 5,314 ಕೋಟಿ ರೂ. ಕಡಿಮೆ ಬರಲಿದೆ. ಆದಾಗ್ಯೂ ಜನರ ಮೇಲಿನ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ವ್ಯಾಟ್ ದರ ಕಡಿತಗೊಳಿಸಿದೆ ಎಂದರು.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಸರ್ಕಾರವಿದೆ. ಅಲ್ಲಿ ವ್ಯಾಟ್ ಕಡಿಮೆ ಮಾಡದಿರುವುದರಿಂದ ಜನರ ಮೇಲೆ ಅನಗತ್ಯ ಹೊರೆ ಬೀಳುತ್ತಿದೆ. 3,472 ಕೋಟಿ ರೂ. ಆದಾಯ ಇದರಿಂದ ಅವರಿಗೆ ದೊರೆತಿದೆ. ಇನ್ನು ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿಯೂ ವ್ಯಾಟ್ ದರ ಕಡಿಮೆ ಮಾಡದಿರುವುದರಿಂದ ಕ್ರಮವಾಗಿ 2,924 ಕೋಟಿ ರೂ. ಮತ್ತು 1,343 ಕೋಟಿ ರೂ. ಆದಾಯವನ್ನು ಉಭಯ ಸರ್ಕಾರಗಳು ಸಂಗ್ರಹ ಮಾಡುತ್ತಿವೆ. ಸರ್ಕಾರದ ಬೊಕ್ಕಸಕ್ಕೆ ಇಷ್ಟು ಹಣ ಬಿದ್ದರೆ, ಜನರು ಮಾತ್ರ ತಮ್ಮ ಕಿಸೆಯಿಂದ ಕಳೆದುಕೊಳ್ಳುವಂತಾಗಿದೆ ಎಂದವರು ಟೀಕಿಸಿದರು.
ಉತ್ತರ ಪ್ರದೇಶ, ಗುಜರಾತ್, ಕರ್ನಾಟಕ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಸರ್ಕಾರಗಳು ಪ್ರಧಾನಿ ಮನವಿಗೆ ಸ್ಪಂದಿಸಿವೆ. ಜನರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವ ಮೂಲಕ ಈ ಸರ್ಕಾರಗಳು ಜನಸೇವೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಪ್ರಶಂಸಿದ ಅವರು, ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ಬಡಾಯಿ ಕೊಚ್ಚುವುದರಲ್ಲಿ ಕಾಂಗ್ರೆಸ್ ನಾಯಕರು ನಿರತರಾಗಿದ್ದಾರೆ ಎಂದು ಆಪಾದಿಸಿದರು.