ಬೆಂಗಳೂರು, ಏ 28 (DaijiworldNews/DB): ಪೈಲಟ್ನ ಸಮಯಪ್ರಜ್ಞೆಯಿಂದಾಗಿ ಸಚಿವರಿಬ್ಬರು ಅನಾಹುತದಿಂದ ಪಾರಾದ ಘಟನೆ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ನಡೆಯಬೇಕಿದ್ದ’ಉದ್ಯಮಿಯಾಗು -ಉದ್ಯೋಗ ನೀಡು’ ಮತ್ತು ಕೈಗಾರಿಕಾ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಂ.ಟಿ.ಬಿ.ನಾಗರಾಜ್ ಮತ್ತು ಮುರುಗೇಶ್ ನಿರಾಣಿ ಅವರು ಬೆಳಗ್ಗೆ ಎಚ್ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಕಾಯ್ದಿರಿಸಿದ್ದರು. ಅದರಂತೆ ಬೆಳಗ್ಗೆ 7 ಗಂಟೆಗೆ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಹೆಲಿಕಾಪ್ಟರ್ ಹೊರಡುವ ವೇಲೆ ತಾಂತ್ರಿಕ ದೋಷ ಕಾಣಿಸಿಕೊಂಡಿತು. ತತ್ಕ್ಷಣ ಎಚ್ಚೆತ್ತುಕೊಂಡ ಪೈಲಟ್ ವಿಮಾನವನ್ನು ಹಾರಿಸದೇ ದೋಷದ ಬಗ್ಗೆ ಸಚಿವದ್ವಯರಿಗೆ ಮಾಹಿತಿ ನೀಡಿದರು. ಇದರಿಂದ ಸಂಭಾವ್ಯ ಅನಾಹುತವೊಂದು ತಪ್ಪಿದಂತಾಗಿದೆ.
ಹೆಲಿಕಾಪ್ಟರ್ ಕೈ ಕೊಟ್ಟದ್ದರಿಂದ ಇಬ್ಬರೂ ಸಚಿವರು ರಸ್ತೆ ಮಾರ್ಗವಾಗಿ ಮೈಸೂರಿಗೆ ತೆರಳಿದರು.