ಲಖನೌ, ಏ 28 (DaijiworldNews/DB): ದೇಶದ ಪ್ರಧಾನಿಯಾಗುವುದು ಅಥವಾ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವುದೇ ನನ್ನ ಗುರಿ. ರಾಷ್ಟ್ರಪತಿ ಆಗಬೇಕೆಂಬ ಯಾವುದೇ ಆಸೆ ನನಗಿಲ್ಲ ಎಂದು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಹೇಳಿದ್ದಾರೆ.
ಮಾಯಾವತಿಯವರು ಬಿಜೆಪಿ ತಮ್ಮನ್ನು ರಾಷ್ಟ್ರಪತಿ ಮಾಡುತ್ತದೆಂಬ ಕನಸು ಕಾಣುತ್ತಿದ್ದಾರೆ ಎಂದ ಎಸ್ಪಿ ನಾಯಕ ಅಖಿಲೇಶ್ ಯಾದವ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ನನ್ನನ್ನು ರಾಷ್ಟ್ರಪತಿ ಮಾಡಿದರೆ ಉತ್ತರ ಪ್ರದೇಶವನ್ನು ಆಳಬಹುದು ಎಂದು ಸಮಾಜವಾದಿ ಪಕ್ಷದ ನಾಯಕರು ಕನಸು ಕಾಣುತ್ತಿದ್ದಾರೆ. ಆದರೆ ಅವರ ಈಡೇರದ ಕನಸನ್ನು ನಾನು ಕಾಣುವುದಿಲ್ಲ. ಪ್ರಧಾನಿ ಅಥವಾ ಮುಖ್ಯಮಂತ್ರಿಯಾಗುವುದಷ್ಟೇ ನನ್ನ ಕನಸು ಎಂದರು.
ಅಂಬೇಡ್ಕರ್ ಮತ್ತು ಕಾನ್ಶಿರಾಮ್ ಅವರ ಕನಸು ಈಡೇರಲು ನಾನು ಶ್ರಮಿಸುತ್ತಿದ್ದೇನೆ. ಅವರದೇ ದಾರಿಯಲ್ಲಿ ಸಾಗುವ ಮೂಲಕ ಜನಸಾಮಾನ್ಯರ ಏಳಿಗೆಗಾಗಿ ದುಡಿಯುತ್ತಿದ್ದೇನೆ. ಹಿಂದುಳಿದವರು, ಆದಿವಾಸಿಗಳು, ದಲಿತರು, ಬಡವರು ಹಾಗೂ ಮುಸ್ಲಿಮರ ಬೆಂಬಲ ಸಿಕ್ಕಲ್ಲಿ ಮುಂದೊಂದು ದಿನ ಪ್ರಧಾನಿಯಾಗಿಯೂ ಜನ ಸೇವೆ ಮಾಡುವ ಭಾಗ್ಯ ನನಗೆ ಒದಗಬಹುದು ಎಂದವರು ತಿಳಿಸಿದರು.