ಹುಬ್ಬಳ್ಳಿ, ಏ 28 (DaijiworldNews/DB): ಭಾರತದಲ್ಲಿ ಎಲ್ಲಾ ಧರ್ಮದವರು ಕೂಡಾ ಶಾಂತಿಯಿಂದ ನೆಲೆಸಿದ್ದಾರೆ. ಪ್ರೀತಿ, ವಿಶ್ವಾಸ, ಒಗ್ಗಟ್ಟು ಇಲ್ಲಿನ ಜನರಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಭಾರತದಲ್ಲಿ ಕೋಮುವಾದ ಹೆಚ್ಚಾದರೆ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ಸ್ಥಿತಿ ಏನಾಗಬಹುದು ಎಂಬ ತೆಲಂಗಾಣ ಮುಖ್ಯಮಂತ್ರಿಗಳ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕೋಮುವಾದ, ಧಾರ್ಮಿಕತೆ ಅವರ ಮನಸ್ಸಿನಲ್ಲಿದೆ. ಆದರೆ ಭಾರತದಲ್ಲಿ ಎಲ್ಲಾ ಧರ್ಮಗಳು ಪರಸ್ಪರ ಅನ್ಯೋನ್ಯವಾಗಿ, ಶಾಂತಿಯಿಂದ ನೆಲೆಸಿದ್ದಾರೆ ಎಂದರು.
ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಸೃಷ್ಟಿಯಾಗಿರುವುದನ್ನು ಬೇರೆ ರಾಷ್ಟ್ರಗಳಲ್ಲಿ ನೋಡಿದ್ದೇವೆ. ನಮ್ಮ ದೇಶದಲ್ಲಿ ಎಲ್ಲರೂ ಶಾಂತಿಯಿಂದಲೇ ಇದ್ದಾರೆ. ಸಂವಿಧಾನಬದ್ಧವಾಗಿ ಎಲ್ಲರೂ ನಡೆದುಕೊಂಡರೆ ಸಾಕು. ಸಲಹೆ ಅನಗತ್ಯ ಎಂದವರು ಇದೇ ವೇಳೆ ತಿಳಿಸಿದರು.
ಗರ್ಭಕೋಶ ಶಸ್ತ್ರಚಿಕಿತ್ಸೆ ನಡೆಸಿ ಹಲವು ಮಹಿಳೆಯರ ಅನಾರೋಗ್ಯಕ್ಕೆ ಕಾರಣವಾದ ಆರೋಪ ಎದುರಿಸುತ್ತಿರುವ ಹಾವೇರಿಯ ವೈದ್ಯನ ಪ್ರಕರಣ ಸಂಬಂಧಿಸಿದಂತೆ ಸಂಪೂರ್ಣ ಅಧ್ಯಯನ ನಡೆಸಿ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದವರು ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.