ಮಂಡ್ಯ, ಏ 28 (DaijiworldNews/DB): ಪಕ್ಷ ಸೇರ್ಪಡೆಯಾಗಬೇಕೋ ಬೇಡವೇ ಎಂಬ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಆದರೆ ಅದನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ ಎಂದು ಬಿಜೆಪಿ ಪಕ್ಷ ಸೇರ್ಪಡೆ ವಿಚಾರವಾಗಿ ಎದ್ದಿರುವ ಕುತೂಹಲದ ಕುರಿತು ಸುದ್ದಿಗಾರರ ಪ್ರಶ್ನೆಗೆ ಸುಮಲತಾ ಅಂಬರೀಶ್ ಉತ್ತರಿಸಿದ್ದಾರೆ.
ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಇದುವರೆಗೆ ನಾನು ಬಿಜೆಪಿ ಸೇರ್ಪಡೆ ಕುರಿತು ಎಲ್ಲಿಯೂ ಮಾತನಾಡಿಲ್ಲ. ಈಗ ಆ ಪ್ರಸ್ತಾಪ ಯಾಕೆ ಬಂತೆಂಬುದು ನನಗೆ ಗೊತ್ತಿಲ್ಲ. ಆದರೆ ಪಕ್ಷ ಸೇರ್ಪಡೆ ಆಗಬೇಕೋ ಬೇಡವೋ ಎಂಬುದಾಗಿ ಜನಾಭಿಪ್ರಾಯ ಆಧರಿಸಿ ನಿರ್ಧರಿಸಲಾಗುವುದು ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ನುಡಿದರು. ಯಾವುದೇ ಪಕ್ಷಕ್ಕೆ ಸೇರುವುದು, ಬಿಡುವುದನ್ನು ಮಾಡಲು ಎಲ್ಲರೂ ಸ್ವತಂತ್ರರು ಎಂದವರು ಇದೇ ವೇಳೆ ತಿಳಿಸಿದರು.
ಅಭಿಷೇಕ್ ರಾಜಕೀಯಕ್ಕೆ ಬರುವುದು ಆತನಿಗೆ ಬಿಟ್ಟ ವಿಚಾರ. ಸಿನಿಮಾಗೂ ನಾನು ಕರೆದಿಲ್ಲ, ರಾಜಕೀಯಕ್ಕೂ ಕರೆಯುವುದಿಲ್ಲ. ಆತನಿಗೆ ಆಸಕ್ತಿ ಇದ್ದ ಕ್ಷೇತ್ರದಲ್ಲಿ ಆತ ತೊಡಗಿಸಿಕೊಳ್ಳುತ್ತಾನೆ ಎಂದವರು ಇದೇ ವೇಳೆ ತಿಳಿಸಿದರು.
ಎರಡು ವರ್ಷಗಳಿಂದ ಬಿಡುಗಡೆಗೆ ಬಾಕಿ ಇದ್ದ ಸಂಸದರ ನಿಧಿ ಪ್ರಸ್ತುತ ಬಿಡುಗಡೆಯಾಗಿರುವುದರಿಂದ ಈ ಬಗ್ಗೆ ಚರ್ಚಿಸುವ ಸಲುವಾಗಿ ಊರಿನ ಮುಖಂಡರ ಸಭೆ ಕರೆದಿದ್ದೇನೆ. ಇದನ್ನು ಬಿಜೆಪಿ ಸೇರ್ಪಡೆ ಸಲುವಾಗಿ ಕರೆದ ಸಭೆ ಎಂದು ಪರಿಭಾವಿಸಬೇಡಿ. ಅಭಿವೃದ್ದಿ ವಿಚಾರ ಚರ್ಚಿಸುವ ಸಲುವಾಗಿ ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ದೇನೇ ಹೊರತು ಪಕ್ಷ ಸೇರ್ಪಡೆ ಬಗ್ಗೆ ಚರ್ಚಿಸಲು ಅಲ್ಲ ಎಂದವರು ಇದೇ ವೇಳೆ ಸ್ಪಷ್ಟಪಡಿಸಿದರು.