ಕಲಬುರಗಿ, ಏ 28 (DaijiworldNews/DB): ಪಿಎಸ್ಐ ಅಕ್ರಮ ನೇಮಕಾತಿ ಸಂಬಂಧ ಬೇರೆ ಪಕ್ಷದವರನ್ನು 24 ಗಂಟೆಗಳಲ್ಲಿ ಬಂಧಿಸುವ ಬಿಜೆಪಿಯವರಿಗೆ ಅವರದೇ ಪಕ್ಷದ ನಾಯಕಿಯ ಬಂಧನಕ್ಕೆ ಇನ್ನೆಷ್ಟು ದಿನ ಬೇಕು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ತಪ್ಪು ಯಾರೇ ಮಾಡಿದರೂ ಅವರು ಶಿಕ್ಷೆಗೆ ಅರ್ಹರಾಗಿರುತ್ತಾರೆ. ಪಕ್ಷಗಳು ಮಾತ್ರವಲ್ಲ, ತಪ್ಪು ನನ್ನ ಮನೆಯಲ್ಲಿ ನಡೆದಿದ್ದರೆ ಅದನ್ನೂ ತನಿಖೆ ಮಾಡಲಿ. ಆದರೆ ನಿಷ್ಪಕ್ಷವಾಗಿ ಆ ತನಿಖೆ ಇರಬೇಕು. ತಪ್ಪು ಮಾಡಿದ ಬಿಜೆಪಿ ನಾಯಕಿಯ ಬಂಧನ ಇನ್ನೂ ಸಾಧ್ಯವಾಗದಿರುವುದು ದುರದೃಷ್ಟಕರ ಎಂದರು.
ಲಕ್ಷಾಂತರ, ಕೋಟ್ಯಾಂತರ ಹಣ ನೀಡಿ ಪಿಎಸ್ಐ ಆದವರು ಕೆಲಸ ಸಿಕ್ಕ ತತ್ಕ್ಷಣ ಸೇವೆಗೆ ಬದಲಾಗಿ ಹಣ ಮಾಡುವ ದಾರಿಯನ್ನು ಹುಡುಕುತ್ತಾರೆ. ಇಂತಹವುಗಳನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ ರಾಜ್ಯದ ಆಡಳಿತ ಯಂತ್ರವೇ ಕೆಡುತ್ತದೆ. ಯಾವುದೇ ಹುದ್ದೆಗೆ ಶಿಫಾರಸ್ಸಿನ ಮೇಲೆ ಪೋಸ್ಟಿಂಗ್ ಆದರೆ ಅವರು ಶಿಫಾರಸ್ಸು ಮಾಡಿದವರ ಕೆಲಸ ಮಾಡುತ್ತಾರೆಯೇ ಹೊರತು ಬಡವರ ಕೆಲಸ ಮಾಡುವುದಿಲ್ಲ. ಒಟ್ಟು ವ್ಯವಸ್ಥೆಯೇ ಇದರಿಂದ ಹಾಳಾಗುತ್ತದೆ ಎಂದು ಖರ್ಗೆ ತಿಳಿಸಿದರು.
ಇಂತಹ ಅಕ್ರಮಗಳಿಂದ ಮುಂದಿನ ಪೀಳಿಗೆ ಸಮಸ್ಯೆ ಅನುಭವಿಸಬೇಕಾಗುತ್ತದೆ. ದಕ್ಷ ಅಭ್ಯರ್ಥಿಗಳು ಆಯ್ಕೆಯಾದರೆ ಆಡಳಿತ ಯಂತ್ರವೂ ಸುಸೂತ್ರವಾಗಿ ಸಾಗುತ್ತದೆ. ನಾನು ಗೃಹ ಸಚಿವನಾಗಿದ್ದಾಗ, ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಒಬ್ಬರಿಗೆ ಒಂದೇ ಅಂಕ ನೀಡಲು ಅವಕಾಶ ಕಲ್ಪಿಸಿದ್ದೆ. ಏಳು ಮಂದಿ ಏಳು ಅಂಕಗಳನ್ನಷ್ಟೇ ನೀಡಲು ಅವಕಾಶವಿತ್ತು. ಇದರಿಂದ ಯಾವುದೇ ಅಕ್ರಮ ನಡೆಯದೆ ಯಶಸ್ವಿ ಸಂದರ್ಶನ ನಡೆಯುತ್ತಿತ್ತು ಎಂದರು.
ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರು ಕೆಲವು ಷರತ್ತುಗಳನ್ನು ಹಾಕಿದ್ದಾರೆ. ಆದರೆ ಅದರ ಮೇಲೆ ಪಕ್ಷ ನಡೆಸುವುದು ಅಸಾಧ್ಯ. ಮುಂದೆ ಏನಾಗುತ್ತದೆಯೋ ನೋಡೋಣ ಎಂದು ತಿಳಿಸಿದರು.