ಮುಂಬೈ, ಏ 28 (DaijiworldNews/DB): ಮಹಾರಾಷ್ಟ್ರದಲ್ಲಿ ಯೋಗಿಗಳಿಲ್ಲ, ಭೋಗಿಗಳಿರುವುದು. ಹಾಗಾಗಿ ಧಾರ್ಮಿಕ ಕೇಂದ್ರಗಳನ್ನು ಧ್ವನಿವರ್ಧಕವನ್ನು ತೆಗೆಯುವ ಕೆಲಸವನ್ನು ಯಾರೂ ಮಾಡುವುದಿಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.
ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆಗೆಸಿರುವ ಯೋಗಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ಬಗ್ಗೆ ಟ್ವೀಟ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ ಅವರು, ಉತ್ತರ ಪ್ರದೇಶದ ಧಾರ್ಮಿಕ ಕೇಂದ್ರಗಳಲ್ಲಿನ ಸುಮಾರು 11,000 ಧ್ವನಿ ವರ್ಧಕಗಳನ್ನುಪೊಲೀಸರು ತೆರವು ಮಾಡಿದ್ದಾರೆ. ವಿಶೇಷವಾಗಿ ಮಸೀದಿಗಳಿಂದ ಧ್ವನಿವರ್ಧಕ ತೆಗೆದು ಹಾಕಿದ್ದಕ್ಕೆ ಯೋಗಿ ಸರ್ಕಾರದ ಕ್ರಮವನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಯೋಗಿಗಳಿಲ್ಲ, ಕೇವಲ ಭೋಗಿಗಳಿದ್ದಾರೆ. ಭೋಗಿಗಳಿಂದ ಇಂತಹ ಮಹತ್ವದ ಕೆಲಸ ಮಾಡಲು ಸಾಧ್ಯವಾಗದು. ಇದು ನಮ್ಮ ದುರಾದೃಷ್ಟ ಎಂದವರು ಇದೇ ವೇಳೆ ಮಹಾರಾಷ್ಟ್ರ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.