ಬೆಂಗಳೂರು, ಏ 28 (DaijiworldNews/MS): ಕೆಪಿಸಿಸಿ ಅಧ್ಯಕ್ಷರ ಅಧಿಕಾರ ಸಿದ್ದರಾಮಯ್ಯ ನಿಯಂತ್ರಣದಲ್ಲಿದೆಯೇ ಅಥವಾ ಡಿಕೆಶಿ ಅವರು ಸಿದ್ದರಾಮಯ್ಯ ಅವರಿಗೆ ಬೆದರಿದ್ದಾರೆಯೇ ಎಂದು ಬಿಜೆಪಿ ಕುಹಕವಾಡಿದೆ.
ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ನಾಯಕತ್ವದ ಪೈಪೋಟಿ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿಯೂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಚುನಾವಣೆಗೆ ಆರು ತಿಂಗಳ ಮುನ್ನವೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಅವರು ಎಲ್ಲಿಯೂ ಈ ಬಗ್ಗೆ ಉಲ್ಲೇಖಿಸಿಲ್ಲ. ಕೆಪಿಸಿಸಿ ಅಧ್ಯಕ್ಷರ ಅಧಿಕಾರ ಸಿದ್ದರಾಮಯ್ಯ ನಿಯಂತ್ರಣದಲ್ಲಿದೆಯೇ ಅಥವಾ ಡಿಕೆಶಿ ಬೆದರಿದ್ದಾರೆಯೇ? ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ನಾಯಕ ರಾಜಣ್ಣ ಅವರು, ಸಿದ್ದರಾಮಯ್ಯ ಪಕ್ಷಕ್ಕೆ ಅನಿವಾರ್ಯ ಎಂದಿದ್ದಾರೆ. ಇನ್ನು ಮೇ ತಿಂಗಳಲ್ಲಿ ರಾಜಸ್ಥಾನದಲ್ಲಿ ನಡೆಯುವ ಚಿಂತನ ಶಿಬಿರದಲ್ಲೂ ಸಿದ್ದರಾಮಯ್ಯ ಅವರ ಹೆಸರೇ ಇದೆ, ಅಲ್ಲದೆ ಕೆಲ ಶಾಸಕರು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹಾಗಾದರೆ ಡಿ ಕೆ ಶಿವಕುಮಾರ್ ಅವರು ಆಟಕ್ಕುಂಟು ಲೆಕ್ಕಕ್ಕಿಲ್ಲವೇ ಎಂದು ಲೇವಡಿ ಮಾಡಿದೆ
ಒಂದು ಕಡೆ ಕೆಪಿಸಿಸಿ ಅಧ್ಯಕ್ಷರು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎಂದು ಹೇಳುತ್ತಿದ್ದಾರೆ.ಮತ್ತೊಂದೆಡೆ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರ ಮೂಲಕ ʼಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆʼ ಎಂದು ಹೇಳಿಸುತ್ತಿದ್ದಾರೆ. ಬುರುಡೆರಾಮಯ್ಯ ಅವರೇ, ಜಾಣ ಮೌನದ ಮೂಲಕ ಡಿಕೆ ಶಿವಕುಮಾರ್ ಅವರಿಗೆ ಟಕ್ಕರ್ ನೀಡುತ್ತಿದ್ದೀರಾ ಎಂದ್ ಬಿಜೆಪಿ ಕೇಳಿದೆ.