ಬೆಂಗಳೂರು, ಏ 28 (DaijiworldNews/DB): ಭಾರತವು ಬಹುಭಾಷೆಗಳ ಗೂಡು. ಅವರವರ ಭಾಷೆ ಬಗ್ಗೆ ಅವರವರಿಗೆ ಸ್ವಾಭಿಮಾನವಿದೆ. ಯಾವುದನ್ನೂ ಅವಗಣಿಸುವುದು ಅಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾತನಾಡಿದ ಅವರು, ಕರ್ನಾಟಕದಲ್ಲೇ ಹಲವಾರು ಭಾಷೆಗಳಿವೆ. ಕೊಡಗಿನಲ್ಲಿ ಒಂದು, ಮಂಗಳೂರಿನಲ್ಲಿ ಇನ್ನೊಂದು ಭಾಷೆಯನ್ನು ಮಾತನಾಡುವವರಿದ್ದಾರೆ. ಬಹುಭಾಷಾ ಗೂಡಾಗಿರುವ ಭಾರತದಲ್ಲಿ ಯಾವ ಭಾಷೆಯನ್ನೂ ತಳ್ಳಿ ಹಾಕುವುದು ಸರಿಯಲ್ಲ ಮತ್ತು ಅದು ಸಾಧ್ಯವೂ ಅಲ್ಲ ಎಂದರು.
ಕನ್ನಡಿಗರಾದ ನಮಗೆ ನಮ್ಮದೇ ಆದ ಸ್ವಾಭಿಮಾನವಿದೆ. ಯಾರೋ ಹಿಂದಿ ರಾಷ್ಟ್ರ ಭಾಷೆ ಎಂದು ಹೇಳಿದ ಮಾತ್ರಕ್ಕೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡ ಭಾಷೆ ನಮಗೆ ಮುಖ್ಯ. ಈ ವಿಷಯ ರಾಷ್ಟ್ರೀಯ ಚರ್ಚೆಯಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದರು.