ಬೆಂಗಳೂರು, ಏ 28 (DaijiworldNews/DB): ದೆಹಲಿ ಭೇಟಿ ವೇಳೆ ಹೈಕಮಾಂಡ್ ನಾಯಕರೊಂದಿಗೆ ಮಾತನಾಡಲು ಯೋಜಿಸಿಲ್ಲ. ಅಲ್ಲದೆ ಭೇಟಿಗೆ ಸಮಯವನ್ನೂ ಕೇಳಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆರ್ ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಹಾಗೂ ಸಿಜೆ ಕಾನ್ಫರೆನ್ಸ್ ಸಭೆ ಎ.30 ರಂದು ಇರುವುದರಿಂದ ಶುಕ್ರವಾರ ರಾತ್ರಿ ದೆಹಲಿಗೆ ಹೋಗುತ್ತಿದ್ದೇನೆ. ಎ.30 ರಂದು ಮುಖ್ಯಮಂತ್ರಿಗಳು ಹಾಗೂ ಸಿಜೆ ಕಾನ್ಫರೆನ್ಸ್ ಇದೆ. ಆದರೆ ಹೈಕಮಾಂಡ್ ಭೇಟಿಗೆ ಸಮಯ ಕೇಳಿಲ್ಲ ಎಂದರು.
ಎಡಿಜಿಪಿ ಅಮೃತ್ ಪಾಲ್ ವರ್ಗಾವಣೆ ಮೂಲಕ ಸರ್ಕಾರ ಅಕ್ರಮವನ್ನು ಒಪ್ಪಿಕೊಂಡಂತಾಗಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನವರು ನಾವೇನೇ ಮಾಡಿದರೂ ಅದರ ಬಗ್ಗೆ ಕೊಂಕು ಮಾತನಾಡುತ್ತಲೇ ಇರುತ್ತಾರೆ. ವರ್ಗಾವಣೆ ಮಾಡಿದರೆ ಯಾಕೆ ಮಾಡಿದಿರಿ ಎಂಬ ಪ್ರಶ್ನೆ, ಮಾಡದೇ ಇದ್ದರೆ ರಕ್ಷಣೆ ಮಾಡುತ್ತಿದ್ದಾರೆ ಎನ್ನುತ್ತಾರೆ. ಅವರು ಹೇಳಿದಕ್ಕೆಲ್ಲ ಉತ್ತರಿಸುತ್ತಾ ಕುಳಿತುಕೊಳ್ಳುವುದೇ ನಮ್ಮ ಕೆಲಸವಲ್ಲ ಎಂದು ತಿರುಗೇಟು ನೀಡಿದರು.