ಬೆಂಗಳೂರು, ಏ 28 (DaijiworldNews/MS): ರಾಜ್ಯದ ಬೊಮ್ಮಾಯಿ ನೇತೃತ್ವದ ಸರ್ಕಾರ ಡಬಲ್ ಇಂಜೀನ್ ಸರ್ಕಾರವಲ್ಲ. ಇದು ಡೀಲಿಂಗ್ ಸರ್ಕಾರ. ಹೀಗಾಗಿ ಹರಾಜು ಪ್ರಕ್ರಿಯೆಯ ಮೂಲಕ ನೇಮಕಾತಿ ಮಾಡಿ.! ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ವ್ಯಂಗ್ಯವಾಡಿದ್ದಾರೆ.
ಸರ್ಕಾರದ ಕಾರ್ಯವೈಖರಿ ಬಗ್ಗೆ ಟೀಕಿಸಿ ಸರಣಿ ಟ್ವೀಟ್ ಮಾಡಿರುವ ಅವರು , " ಈ ಸರ್ಕಾರದಲ್ಲಿ ಪ್ರತಿ ಸರ್ಕಾರಿ ಉದ್ಯೋಗಕ್ಕೂ ಇಂತಿಷ್ಟು ರೇಟ್ ಎಂದು ಫಿಕ್ಸ್ ಆಗಿದೆ. ಪಿಎಸ್ ಐ ನೇಮಕಾತಿಯಲ್ಲಿ ಡೀಲಿಂಗ್, ಪ್ರಾಧ್ಯಾಪಕರ ನೇಮಕಾತಿಯಲ್ಲಿ ಡೀಲಿಂಗ್, ಇಂಜಿನಿಯರ್ಗಳ ನೇಮಕಾತಿಯಲ್ಲೂ ಡೀಲಿಂಗ್. ಇದು ಡೀಲಿಂಗ್ ಸರ್ಕಾರವಲ್ಲದೆ ಮತ್ತೇನು? ಎಂದು ಪ್ರಶ್ನಿಸಿದ್ದಾರೆ.
'ರಾಜ್ಯ ಬಿಜೆಪಿ ಸರ್ಕಾರ ಅರ್ಹತಾ ಪರೀಕ್ಷೆಯ ಮೂಲಕ ಸರ್ಕಾರಿ ಉದ್ಯೋಗ ಭರ್ತಿ ಮಾಡುವುದೇಕೆ? ವಿಧಾನಸೌಧವನ್ನೇ ಡೀಲಿಂಗ್ ಸೆಂಟರ್ ಮಾಡಿಕೊಂಡಿರುವಾಗ ಎಲ್ಲಾ ನೇಮಕಾತಿಯನ್ನು ಹರಾಜು ಪ್ರಕ್ರಿಯೆಯ ಮೂಲಕವೇ ನಡೆಸಲಿ. ಈ ಸರ್ಕಾರದಲ್ಲಿ ದುಡ್ಡಿದ್ದವನಿಗೆ ಉದ್ಯೋಗ ಎಂದ ಮೇಲೆ ಬಡವರು ಯಾಕೆ ಪರೀಕ್ಷೆ ಬರೆಯಬೇಕು? ಸಮಯ-ಹಣ ಯಾಕೆ ವ್ಯರ್ಥ ಮಾಡಬೇಕು?ಡೀಲಿಂಗ್ ದಂಧೆಯಲ್ಲಿ ಮುಳುಗಿರುವ ಡೀಲಿಂಗ್ ಸರ್ಕಾರ ಇತಿಹಾಸ ಕಂಡ ಅತ್ಯಂತ ಕಡುಭ್ರಷ್ಟ ಸರ್ಕಾರ. ಸರ್ಕಾರಿ ಉದ್ಯೋಗಕ್ಕೆ ರೇಟ್ ಫಿಕ್ಸ್ ಮಾಡಿ ದಂಧೆ ನಡೆಸುವ ಈ ಸರ್ಕಾರಕ್ಕೆ ಮಾನ ಮಾರ್ಯಾದೆಯೇನಾದರೂ ಇದೆಯೆ? ಭ್ರಷ್ಟಾಚಾರವನ್ನು ಹಾಸು ಹೊದ್ದು ಮಲಗಿರುವ ಈ ಸರ್ಕಾರಕ್ಕೆ ಜನರ ಎದುರು ಮುಖ ತೋರಿಸಲು ನಾಚಿಕೆಯಾಗುವುದಿಲ್ಲವೆ?' ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.