ಬೆಂಗಳೂರು, ಏ 27 (DaijiworldNews/DB): ಪಿಎಸ್ಐ ನೇಮಕಾತಿ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಎಡಿಜಿಪಿ ಅವರನ್ನು ವರ್ಗಾವಣೆ ಮಾಡಲು ಸರ್ಕಾರಕ್ಕೆ ಹದಿನೈದು ದಿನ ಬೇಕಾಗಿತ್ತಾ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಬಿಜೆಪಿಯು ಎಡಿಜಿಪಿ ಅವರನ್ನು ವರ್ಗಾವಣೆ ಮಾಡುವುದು ಬಹಳ ತಡವಾಗಿದೆ. ಆದಾಗ್ಯೂ ಹಗರಣ ನಡೆದಿದ್ದು, ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂಬುದನ್ನು ಸರ್ಕಾರ ಒಪ್ಪಿಕೊಂಡಂತಾಗಿದೆ ಎಂದರು.
ದಿವ್ಯಾ ಹಾಗರಗಿ ಅವರೊಂದಿಗೆ ಡಿ.ಕೆ. ಶಿವಕುಮಾರ್ ಇರುವ ಫೋಟೋ ವೈರಲ್ ಆಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಅಧ್ಯಕ್ಷರೇ ಸ್ಪಷ್ಟನೆ ಕೊಟ್ಟಿದ್ದಾರೆ. ದಿವ್ಯಾ ಅವರು ತಮ್ಮ ಮಗನ ಮದುವೆ ಆಮಂತ್ರಣ ನೀಡಲು ನನ್ನ ಮನೆಗೂ ಬಂದಿದ್ದರು. ಹಾಗಾಗಿ ನನ್ನೊಂದಿಗೂ ಫೋಟೋ ಇರಬಹುದು. ಮೋದಿ ಜೊತೆಯೂ ಇರಬಹುದು. ಫೋಟೋ ಯಾರೊಂದಿಗೆ ಬೇಕಾದರೂ ಇರಲಿ. ಅವರು ಕಾಂಗ್ರೆಸ್, ಜೆಡಿಎಸ್, ಬಿಜೆಪಿಯವರೋ ಎಂಬುವುದು ಮುಖ್ಯವಲ್ಲ. ಮೊದಲು ಅವರೊಬ್ಬ ಆರೋಪಿ. ಅವರ ಮೇಲೆ ಬಂದಿರುವ ಆರೋಪವನ್ನು ಪರಿಗಣಿಸಿ ಬಂಧಿಸಿ, ವಿಚಾರಣೆ ನಡೆಸಬೇಕೇ ಹೊರತು ಇದರಲ್ಲಿ ರಾಜಕೀಯ ಹುಡುಕುವುದು ಸಲ್ಲ ಎಂದು ತಿಳಿಸಿದರು.