ಬೆಂಗಳೂರು, ಏ 27 (DaijiworldNews/DB): ಮಾಜಿ ಮಹಿಳಾ ಹಾಕಿ ಆಟಗಾರ್ತಿ ಎಲ್ವಿರಾ ಬ್ರಿಟ್ಟೋ ಮಂಗಳವಾರ ನಿಧನ ಹೊಂದಿದರು.
ಉತ್ತಮ ಹಾಕಿ ಆಟಗಾರ್ತಿಯಾಗಿದ್ದ ಅವರು, ಮಹಿಳಾ ಹಾಕಿ ಪಂದ್ಯಾಟದ ಚಾಂಪಿಯನ್ ಆಗಿದ್ದ ಅವರು, ಭಾರತ ತಂಡದ ಮತ್ತು ಮೈಸೂರು ತಂಡದ ಕ್ಯಾಪ್ಟನ್ ಕೂಡಾ ಆಗಿದ್ದರು. 1960ರಿಂದ 1967ರ ತನಕ ಸತತ ಎಂಟು ವರ್ಷ ಕಾಲ ಹಿರಿಯರ ರಾಷ್ಟ್ರೀಯ ಹಾಕಿ ಪಂದ್ಯಾಟದಲ್ಲಿ ಮೈಸೂರನ್ನು ಪ್ರತಿನಿಧಿಸಿದ್ದರು. ಅವರ ಸಹೋದರಿಯರಾದ ರೀಟಾ ಮತ್ತು ಮಾಯಿ ಅವರು ಕೂಡಾ ರಾಜ್ಯ ಮತ್ತು ರಾಷ್ಟ್ರ ತಂಡಗಳಲ್ಲಿ ಆಡಿದ್ದರು.
1966ರಲ್ಲಿ ಎಲ್ವಿರಾ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದು, ಈ ಪ್ರಶಸ್ತಿ ಪಡೆದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ. ಬಳಿಕ ರಾಷ್ಟ್ರೀಯ ಆಯ್ಕೆ ಸಮಿತಿಗೆ ಸರ್ಕಾರದಿಂದ ನಾಮನಿರ್ದೇಶನಗೊಂಡು ಹತ್ತು ವರ್ಷ ಸೇವೆ ಸಲ್ಲಿಸಿದ್ದರು. ಕರ್ನಾಟಕ ರಾಜ್ಯ ಮಹಿಳಾ ಹಾಕಿ ಸಂಘಟನೆಯ ಅಧ್ಯಕ್ಷರಾಗಿಯೂ ಎರಡು ಅವಧಿಗೆ ಕಾರ್ಯನಿರ್ವಹಿಸಿದ್ದಾರೆ.
ಎಲ್ವಿರಾ ನಿಧನಕ್ಕೆ ಕರ್ನಾಟಕ ರಾಜ್ಯ ಹಾಕಿ ಸಂಘಟನೆಯು ಸಂತಾಪ ವ್ಯಕ್ತಪಡಿಸಿದೆ.
ಮಂಗಳೂರಿನ ನೆಹರೂ ಮೈದಾನ ಆಸ್ತಿಯು ಎಲ್ವಿರಾ ಅವರ ಅಜ್ಜನ ಆಸ್ತಿಯಾಗಿದ್ದು, ಇದನ್ನು ಕ್ರೀಡೆ ಮತ್ತು ಗೇಮ್ಸ್ ಚಟುವಟಿಕೆಗಳಿಗಾಗಿ ಜಿಲ್ಲಾಡಳಿತಕ್ಕೆ ಉಡುಗೊರೆಯಾಗಿ ನೀಡಲಾಗಿತ್ತು. ಆದರೆ, ಅಲ್ಲಿ ಪ್ರಸ್ತುತ ಮೀನು ಮಾರುಕಟ್ಟೆ, ಬಸ್ ನಿಲ್ದಾಣ, ಪಾರ್ಕ್, ಪುರಭವನ, ಹೊಸ ಪಾದಚಾರಿ ಸೇತುವೆ ನಿರ್ಮಾಣಗೊಂಡಿದೆ.