ಕೇರಳ, ಏ 27 (DaijiworldNews/DB): ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ ನಟಿಯ ಹೆಸರನ್ನು ಬಹಿರಂಗಪಡಿಸುವ ಮೂಲಕ ಮಲಯಾಳಂ ನಟ ಹಾಗೂ ನಿರ್ಮಾಪಕ ವಿಜಯ್ ಮತ್ತೊಂದು ಸಂಕಷ್ಟಕ್ಕೆ ಒಡ್ಡಿಕೊಂಡಿದ್ದಾರೆ.
ಯುವತಿಯೋರ್ವಳು ನಟ ವಿಜಯ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದಳು. ಇದಾದ ಬಳಿಕ ಫೇಸ್ಬುಕ್ನಲ್ಲಿ ಲೈವ್ ಬಂದ ವಿಜಯ್, ತಮ್ಮ ಮೇಲೆ ಆರೋಪ ಹೊರಿಸಿದ ನಟಿಯ ಹೆಸರು ಬಹಿರಂಗಪಡಿಸಿದ್ದಾರೆ. ಅಲ್ಲದೆ ಇದಕ್ಕಾಗಿ ಯಾವುದೇ ಕಾನೂನು ಪರಿಣಾಮಗಳನ್ನು ಎದುರಿಸಲು ಸಿದ್ದನಿದ್ದೇನೆ ಎಂದೂ ಹೇಳಿದ್ದಾರೆ. ಆರೋಪದಿಂದಾಗಿ ನನ್ನ ಹೆಸರಿಗೆ ಕಳಂಕ ಉಂಟಾಗಿದೆ. ಅಲ್ಲದೆ ಕುಟುಂಬದವರಿಗೆ ಕೂಡಾ ಇದರಿಂದ ದುಃಖವಾಗಿದೆ. ಹೀಗಾಗಿ ಅವರ ಹೆಸರನ್ನು ನಾನು ಬಹಿರಂಗಗೊಳಿಸುತ್ತಿದ್ದೇನೆ. ಕಾನೂನಿನಡಿ ಹೆಸರು ಬಹಿರಂಗಗೊಳಿಸುವ ಹಾಗಿಲ್ಲ. ಆದರೆ ಇದರಿಂದಾಗುವ ಎಲ್ಲಾ ಪರಿಣಾಮಗಳನ್ನು ಎದುರಿಸುತ್ತೇನೆ ಎಂದಿದ್ದಾರೆ.
ಆಕೆ ಕಳೆದ ಐದು ವರ್ಷದಿಂದ ಪರಿಚಿತೆ. ಆದರೆ ನಾನು ಯಾವುದೇ ತಪ್ಪು ಎಸಗಿಲ್ಲ. ಅಲ್ಲದೆ ನಟಿ ಕಳುಹಿಸಿದ ಸಂದೇಶಗಳು ಮತ್ತು 400 ಸ್ಕ್ರೀನ್ಶಾಟ್ಗಳು ಸೇರಿದಂತೆ ಹಲವು ಪುರಾವೆಗಳು ನನ್ನ ಬಳಿ ಇವೆ. ಮುಂದೆ ಮಾನನಷ್ಟ ಮೊಕದ್ದಮೆಯನ್ನೂ ದಾಖಲಿಸುತ್ತೇನೆ ಎಂದು ವಿಜಯ್ ಹೇಳಿದ್ದಾರೆ.