ಬೆಂಗಳೂರು, ಏ 27 (DaijiworldNews/DB): ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದ್ದರೂ ಜನ ಅಗತ್ಯವಾಗಿ ಸ್ವಯಂ ರಕ್ಷಣೆಗೆ ಮುಂದಾಗಬೇಕು. ಯಾವುದೇ ಕಠಿಣ ನಿಯಮಗಳನ್ನು ಸದ್ಯಕ್ಕೆ ಜಾರಿ ಮಾಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರೊಂದಿಗಿನ ವೀಡಿಯೋ ಕಾನ್ಫೆರೆನ್ಸ್ ಬಳಿಕ ನಗರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಪರೀಕ್ಷೆಯನ್ನು ಹೆಚ್ಚಿಸಲಾಗುತ್ತದೆ. ಹೈ ರಿಸ್ಕ್ ದೇಶಗಳಿಂದ ಬರುವ ವಿದೇಶಿಗರು ಮತ್ತು ಅನಿವಾಸಿ ಭಾರತೀಯರ ಬಗ್ಗೆ ವಿಶೇಷ ನಿಗಾ ಇಡಲಾಗುತ್ತದೆ. ಅಲ್ಲದೆ 6-12 ವರ್ಷದ ಮಕ್ಕಳಿಗೆ ಅಭಿಯಾನದ ಮುಖಾಂತರ ಲಸಿಕೆ ನೀಡುವುದಕ್ಕೂ ಸರ್ಕಾರ ಮುತುವರ್ಜಿ ವಹಿಸಲಿದೆ ಎಂದರು.
ಪ್ರತಿದಿನ 30 ಸಾವಿರ ಮಂದಿಗೆ ಪರೀಕ್ಷಿಸಲಾಗುತ್ತಿದೆ. ಏಪ್ರಿಲ್ 9ರ ಬಳಿಕ ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಜಾಸ್ತಿಯಾಗಿದ್ದು, ಜನ ಜಾಗೃತೆ ವಹಿಸಬೇಕು. ತ್ವರಿತ ವ್ಯಾಕ್ಸಿನ್, ಆಕ್ಸಿಜನ್ ಕಾಯ್ದಿರಿಸಿಕೊಳ್ಳಲು ಪ್ರಧಾನಿಯವರು ಸೂಚಿಸಿದ್ದಾರೆ. 3ಟಿ (ಟ್ರಾಕ್, ಟ್ರೇಸ್, ಟ್ರೀಟ್ಮೆಂಟ್) ಸೂತ್ರವನ್ನು ಅಳವಡಿಸಿಕೊಳ್ಳಲು ಸಲಹೆ ಮಾಡಿದ್ದಾರೆ. ಮಾಸ್ಕ್ ಕಡ್ಡಾಯ ನಿಯಮಕ್ಕೂ ಸೂಚನೆ ನೀಡಿದ್ದಾರೆ. ಆದರೆ ಸದ್ಯಕ್ಕೆ ರಾಜ್ಯದಲ್ಲಿ ಕಠಿಣ ನಿಯಮ ಜಾರಿಗೊಳ್ಳುವುದಿಲ್ಲ. ಜನ ಇದಕ್ಕೆ ಸಹಕರಿಸಬೇಕು ಎಂದರು.