ಬೆಂಗಳೂರು, ಏ 27 (DaijiworldNews/MS): ಮಾಧ್ಯಮದವರ ಮುಂದೆ ಪ್ರಕರಣದ ತನಿಖಾಧಿಕಾರಿಯಂತೆ ವರ್ತಿಸುವ ಕಾಂಗ್ರೆಸ್ ನಾಯಕರು, ತನಿಖೆಗೆ ಸಹಕರಿಸುವಂತೆ ಪೊಲೀಸ್ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದಾಗ ಕಳ್ಳರಂತೆ ಹಿಂದೆ ಸರಿದ್ದೇಕೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಪತ್ರಿಕೆ ಸೋರಿಕೆ ವಿಚಾರವಾಗಿ ಕಾಂಗ್ರೆಸ್ ಬಿಜೆಪಿ ಆರೋಪ ಪ್ರತ್ಯರೋಪದಲ್ಲಿ ತೊಡಗಿದ್ದು , ಇದೀಗ ಮತ್ತೆ ಕಾಂಗ್ರೆಸ್ ವಿರುದ್ದ ಕಿಡಿ ಕಾರಿ ಟ್ವಿಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ನಾಯಕರ ಕಳ್ಳ-ಪೊಲೀಸ್ ಆಟದ ಹಿಂದೆ ಡಿ.ಕೆ ಶಿವಕುಮಾರ್ ಪಾತ್ರವಿರುವುದು ನಿಜವಲ್ಲವೇ? ಎಂದು ಆರೋಪಿಸಿದೆ.
ಕಲಬುರ್ಗಿಯ ಕಾಂಗ್ರೆಸ್ ಮುಖಂಡನಿಗೆ ಸೇರಿದ ಪಾಲಿಟೆಕ್ನಿಕ್ ಕಾಲೇಜಿನ ಪರೀಕ್ಷಾ ಕೇಂದ್ರದಿಂದ ಪತ್ರಿಕೆ ಸೋರಿಕೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ದಂಧೆಯ ಹಣ ಸದಾಶಿವ ನಗರದ ಭವ್ಯ ಬಂಗಲೆಗೆ ರವಾನೆಯಾಗುತ್ತಿತ್ತೇ? ಭ್ರಷ್ಟಾಧ್ಯಕ್ಷ ರೇ ಏನು ಹೇಳುವಿರಿ ಇದಕ್ಕೆ ಎಂದು ಪ್ರಶ್ನಿಸಿದೆ.
ಪ್ರತಿ ಹಗರಣಗಳ ಬುಡ ಅಗೆದಾಗ, ಅದರ ಬೇರುಗಳು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯನ್ನು ತಲುಪುತ್ತಿದೆ ಪಿಎಸ್ಐ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಅತ್ಯಾಪ್ತರ ಬಂಧನವಾಗಿದ್ದು, ಪಿಡಬ್ಲ್ಯೂಡಿ ಪತ್ರಿಕೆ ಲೀಕ್ ಹಿಂದೆಯೂ ಕಾಂಗ್ರೆಸ್ ʼಹಸ್ತʼವಿದೆ. ಭ್ರಷ್ಟನೊಬ್ಬ ಪಕ್ಷದ ಸಾರಥಿಯಾದರೆ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಟೀಕಿಸಿದೆ.