ತಮಿಳುನಾಡು, ಏ 27 (DaijiworldNews/DB): ಇ-ಬೈಕ್ನ ಬ್ಯಾಟರಿ ಖಾಲಿಯಾಯಿತೆಂದು ರೊಚ್ಚಿಗೆದ್ದ ವ್ಯಕ್ತಿಯೋರ್ವ ಬೈಕ್ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬೈಕ್ ಖರೀದಿಸಿದ ಕಂಪೆನಿಗೆ ವೀಡಿಯೋ ಟ್ವೀಟ್ ಮಾಡಿದ್ದಾನೆ.
ವೃತ್ತಿಯಲ್ಲಿ ಫಿಸಿಯೋಥೆರಪಿಸ್ಟ್ ಆಗಿರುವ ಪೃಥ್ವಿರಾಜ್ ಗೋಪಿನಾಥನ್ ಬೈಕ್ಗೆ ಬೆಂಕಿ ಹಚ್ಚಿರುವ ವ್ಯಕ್ತಿ. ತಮಿಳುನಾಡಿನ ಅಂಬರ್ನಲ್ಲಿ ಘಟನೆ ನಡೆದಿದೆ. ಒಮ್ಮೆ ಚಾರ್ಜ್ ಮಾಡಿದರೆ181 ಕಿ.ಮೀ. ಸಂಚರಿಸಬಹುದು ಎಂಬುದಾಗಿ ಕಂಪೆನಿ ತಿಳಿಸಿತ್ತು. ಆದರೆ 50-60 ಕಿ.ಮೀ. ಚಲಿಸುವಷ್ಟರಲ್ಲಿ ಬ್ಯಾಟರಿ ಖಾಲಿಯಾಗಿದೆ. ಈ ಹಿಂದೆಯೂ ಅನೇಕ ಬಾರಿ ಬೈಕ್ನಿಂದ ಸಮಸ್ಯೆ ಎದುರಿಸಿದ್ದೇನೆ ಎಂದು ಆತ ಟ್ವೀಟ್ ಮಾಡಿ ಕಂಪೆನಿ ವಿರುದ್ದ ಕಿಡಿ ಕಾರಿದ್ದಾನೆ.
ಇದಕ್ಕೂ ಮೊದಲು ವಾಹನ ಉತ್ಪಾದಕ ಕಂಪೆನಿಯ ಸಿಬಂದಿಗೆ ಕರೆ ಮಾಡಿದಾಗ ಸಂಜೆ ವೇಳೆಗೆ ಸಹಾಯಕ್ಕೆ ಸಿಬಂದಿಯನ್ನು ಕಳಿಸುವುದಾಗಿ ಕಂಪೆನಿ ತಿಳಿಸಿದೆ. ಆದರೆ ಮಧ್ಯಾಹ್ನ ಬ್ಯಾಟರಿ ಖಾಲಿಯಾಗಿರುವುದರಿಂದ ಸಂಜೆ ತನಕ ಕಾಯಲು ಸಾಧ್ಯವಿಲ್ಲ ಎಂದು ಬೆಂಕಿ ಹಚ್ಚಿದ್ದಾನೆ.
ಟ್ವೀಟ್ ನೋಡಿದ ಕಂಪೆನಿ ತತ್ಕ್ಷಣ ಆತನಿಗೆ ಕರೆ ಮಾಡಿ ಬೇರೆ ಬೈಕ್ ಕಳುಹಿಸಿಕೊಡುತ್ತೇವೆ, ಮಾಧ್ಯಮದವರಿಗೆ ವಿಷಯ ತಿಳಿಸಬೇಡಿ ಎಂಬುದಾಗಿ ವಿನಂತಿಸಿಕೊಂಡಿದೆ. ಆದರೆ ಪೃಥ್ವಿರಾಜ್ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಆದಾಗ್ಯೂ ಹೊಸ ಇ-ಬೈಕ್ನ್ನು ಅದೇ ದಿನ ಕಂಪೆನಿಯು ಆತನ ಕ್ಲಿನಿಕ್ಗೆ ಕಳುಹಿಸಿಕೊಟ್ಟಿದೆ.