ನವದೆಹಲಿ,ಏ 27 (DaijiworldNews/MS): ಚುನಾವಣಾ ಚಾಣಾಕ್ಯ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುವ ಆಫರ್ ತಿರಸ್ಕರಿದ ಬೆನ್ನಲ್ಲೇ , 2024 ರ ಸಾರ್ವತ್ರಿಕ ಚುನಾವಣೆಯ ಮೊದಲು ಪಕ್ಷಕ್ಕೆ ಬಲ ತುಂಬುವ ಕಾಂಗ್ರೆಸ್ ಪ್ರಯತ್ನವನ್ನು ಭಾರತೀಯ ಜನತಾ ಪಕ್ಷದ ನಾಯಕರು ಲೇವಡಿ ಮಾಡಿದ್ದಾರೆ.
ಮಾರಾಟದ ಉತ್ಪನ್ನವು ಕಳಪೆಯಾಗಿದ್ದರೆ , ಅದನ್ನು ಎಷ್ಟೇ ಉತ್ತಮ ಸೇಲ್ಸ್ ಮೆನ್ಸ್ ಆಗಿದ್ದರೂ ಸೇಲ್ ಮಾಡಲು ಸಾಧ್ಯವಾಗೋದಿಲ್ಲ. ರಾಜವಂಶದ ರಾಜಕೀಯ ಉತ್ಪನ್ನವನ್ನು ಅದರ ಮುಕ್ತಾಯ ದಿನಾಂಕ ( ಡೇಟ್ ಬಾರ್) ಆದ ನಂತರ ಮಾರಾಟ ಮಾಡಲು ಸಾಧ್ಯವಿಲ್ಲ" ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಸೇರ್ಪಡೆಗೊಳಿಸಲು ಕಾಂಗ್ರೆಸ್ನ ವಿಫಲ ಪ್ರಯತ್ನದ ಕುರಿತು ಲೇವಡಿ ಮಾಡಿದ್ದಾರೆ.
ಪಕ್ಷದ ಅಜೆಂಡಾವು "ಪರಿವಾರ ಬಚಾವೋ, ಪಕ್ಷ ಬಚಾವೋ (ಕುಟುಂಬವನ್ನು ಉಳಿಸಿ, ಪಕ್ಷವನ್ನು ಉಳಿಸಿ)" ಆಗಿದೆ ಹೀಗಾಗಿ ಪಕ್ಷದೊಳಗಿನ ಪರಿವರ್ತನಾ ಮತ್ತು ರಚನಾತ್ಮಕ ಸುಧಾರಣೆಗಳ ಕುರಿತು ಕಿಶೋರ್ ಅವರ ಸಲಹೆಗಳಿಂದ ಕಾಂಗ್ರೆಸ್ ವಿಚಲಿತರಾಗಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ವಕ್ತಾರ ಗುರು ಪ್ರಕಾಶ್ ಪಾಸ್ವಾನ್ ಇದೇ ವಿಚಾರದ ಕುರಿತು , ಪ್ರಶಾಂತ್ ಕಿಶೋರ್ ಅವರ ವರ್ಚಸ್ಸಿನ ಬಗ್ಗೆ ಪ್ರಶ್ನಿಸಿದ್ದು, ಕೇವಲ ಮಾಧ್ಯಮಗಳು ಅವರನ್ನು ಸೆಲೆಬ್ರಿಟಿಯನ್ನಾಗಿ ಮಾಡಿದೆ . ರಾಜಕೀಯ ಪಕ್ಷಗಳು ಚುನಾವಣೆಯ ಸಮಯದಲ್ಲಿ ಮಾರಾಟಗಾರರನ್ನು ಬಳಸುತ್ತವೆ ಹೀಗಾಗಿ ಪ್ರಶಾಂತ್ ಕಿಶೋರ್ ಕೇವಲ ಓರ್ವ ಮಾರಾಟಗಾರ ಆಗಿದ್ದಾರೆ ಎಂದು ಹೇಳಿದ್ದಾರೆ.