ಬೆಂಗಳೂರು, ಏ 27 (DaijiworldNews/DB): ಮುಂದಿನ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರಗಳನ್ನು ರೂಪಿಸುವ ಸಲುವಾಗಿ ಈ ವಾರಾಂತ್ಯದ ಬಳಿಕ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದಲ್ಲಿ ದೆಹಲಿಯಲ್ಲಿ ಮಹತ್ವದ ಸಭೆ ನಡೆಯುವ ಸಾಧ್ಯತೆ ಇದ್ದು, ಬಿಎಸ್ವೈ ಪುತ್ರ ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆ ಸಂಬಂಧ ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ.
ದೆಹಲಿಯಲ್ಲಿ ಬಿಜೆಪಿ ವರಿಷ್ಠರು ಮತ್ತು ಆರೆಸ್ಸೆಸ್ ಮುಖಂಡರ ಸಭೆ ಏಪ್ರಿಲ್ 29 ರ ನಂತರ ನಡೆಯುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಭೇಟಿ ಮಾಡಲಿದ್ದು, ಆ ಬಳಿಕ ಸಭೆ ಕರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಸಂಪುಟ ವಿಸ್ತರಣೆ ವೇಳೆ ವಿಜಯೇಂದ್ರ ಅವರನ್ನು ಪರಿಗಣಿಸುವ ಸಂಬಂಧವೂ ಚರ್ಚೆಯಾಗಲಿದೆ. ಮುಂದಿನ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರ ಮುಂದಾಳತ್ವದಲ್ಲೇ ಎದುರಿಸುವ ಬಗ್ಗೆ ಈಗಾಗಲೇ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೂಡಾ ಹೇಳಿದ್ದಾರೆ. ಹೀಗಾಗಿ ವಿಜಯೇಂದ್ರ ಅವರ ಸಂಪುಟ ಸೇರ್ಪಡೆ ವಿಚಾರ ಮುಖ್ಯವಾಹಿನಿಗೆ ಬರುವ ಸಾಧ್ಯತೆ ಹೆಚ್ಚಾಗಿದೆ.
ಇದರೊಂದಿಗೆ ಕಳೆದೆರಡು ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ವಿಷಯಗಳಿಗೆ ಸಂಬಂಧಿಸಿದಂತೆಯೂ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.