ಬೆಂಗಳೂರು, ಏ 27 (DaijiworldNews/DB): ಪಿಎಸ್ಐ ಅಕ್ರಮ ನೇಮಕಾತಿ ಆರೋಪ ಎದುರಿಸುತ್ತಿರುವ ಡಿವ್ಯಾ ಹಾಗರಗಿ ಜೊತೆ ನಾನು ಮಾತನಾಡಿರುವ ಫೋಟೋ ವೈರಲ್ ಆಗಿರುವ ಸಂಬಂಧ ನನಗೆರ ಪೊಲೀಸರು ನೊಟೀಸ್ ನೀಡಲಿ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ದಿವ್ಯಾ ಜೊತೆ ಡಿ.ಕೆ. ಶಿವಕುಮಾರ್ ಮಾತನಾಡುತ್ತಿರುವ ಫೋಟೋ ವೈರಲ್ ಆಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೂ ನೊಟೀಸ್ ನೀಡಿ ವಿಚಾರಣೆಗೆ ಕರೆಯಲಿ ಎಂದರು.
ದಿನನಿತ್ಯ ಹಲವಾರು ಜನ ನನ್ನನ್ನು ಭೇಟಿಯಾಗುತ್ತಾರೆ. ನಾನು ಮಂತ್ರಿ ಆಗಿದ್ದಾಗ ಯಾವುದೇ ಡೆಲಿಗೇಶನ್ನ್ನು ದಿವ್ಯಾ ಅವರು ಕರೆ ತಂದಿದ್ದರು. ಆದರೆ ಈಗ ಆ ಫೋಟೋ ಹಿಡಿದುಕೊಂಡು ಬಿಜೆಪಿಯವರು ನನ್ನ ಬಗ್ಗೆ ಇಲ್ಲಸಲ್ಲದ ವಿಚಾರ ಮಾತನಾಡುತ್ತಿದ್ದಾರೆ. ನಾನೂ ಅಕ್ರಮದಲ್ಲಿ ಭಾಗಿಯಾಗಿದ್ದೇನೆ ಎನ್ನುವ ಅವರಿಗೆ ಸ್ಪಷ್ಟನೆ ಬೇಕಾದರೆ ಪೊಲೀಸರು ನನಗೆ ನೊಟೀಸ್ ನೀಡಿ ವಿಚಾರಣೆಗೆ ಕರೆಯಲಿ ಎಂದು ತಿಳಿಸಿದರು.
ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ, ನಿರಾಕರಣೆ ಎಲ್ಲವೂ ಅವರಿಗೆ ಬಿಟ್ಟ ವಿಚಾರ. ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ನಾನು ಈ ಬಗ್ಗೆ ಯಾವುದೇ ಮಾತನ್ನಾಡಲು ಇಷ್ಟಪಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.