ನವದೆಹಲಿ, ಏ 27 (DaijiworldNews/HR): ದೇಶದಲ್ಲಿ ಹರಡುತ್ತಿರುವ ರಾಜಕೀಯ ದ್ವೇಷಕ್ಕೆ ಅಂತ್ಯ ಹಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ನೂರಕ್ಕೂ ಅಧಿಕ ಮಾಜಿ ಅಧಿಕಾರಿಗಳು ಪತ್ರ ಬರೆದು ಮನವಿ ಮಾಡಿದ್ದಾರೆ.
ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್, ಮಾಜಿ ಗೃಹ ಕಾರ್ಯದರ್ಶಿ ಜಿಕೆ ಪಿಳ್ಳೈ, ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪ್ರಧಾನ ಕಾರ್ಯದರ್ಶಿ ಟಿಕೆಎ ನಾಯರ್ ಸೇರಿದಂತೆ 108 ಮಂದಿ ಪತ್ರಕ್ಕೆ ಸಹಿ ಹಾಕಿದ್ದಾರೆ.
ಇನ್ನು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ, ದೇಶದ ರಾಜಕೀಯ ಪರಿಸ್ಥಿತಿಯ ಬಗ್ಗೆ ಮಾಜಿ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದು, ನಾವು ಹಿಂದೆಂದು ಕಂಡಿರದ ಬೆದರಿಕೆಯನ್ನು ದೇಶದಲ್ಲಿ ಎದುರಿಸುತ್ತಿದ್ದೇವೆ. ಅಪಾಯದಲ್ಲಿರುವುದು ಕೇವಲ ಸಾಂವಿಧಾನಿಕ ನೈತಿಕತೆ ಮತ್ತು ನಡವಳಿಕೆಯಲ್ಲ ಎಂದು ತಿಳಿಸಿದ್ದಾರೆ.
'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಎಂಬ ನಿಮ್ಮ ಭರವಸೆಯನ್ನು ನಾವು ಹೃದಯದಿಂದ ಸ್ವೀಕರಿಸುತ್ತೇವೆ. ನಿಮ್ಮ ಆತ್ಮಸಾಕ್ಷಿಗೆ ನಾವು ಮನವಿ ಮಾಡುತ್ತೇವೆ ಎಂದು ಬರೆದಿದ್ದಾರೆ.