ಲಖನೌ, ಏ 27 (DaijiworldNews/DB): ಧಾರ್ಮಿಕ ಸ್ಥಳಗಳಲ್ಲಿ ಅಳವಡಿಸಿರುವ ಅಕ್ರಮ ಧ್ವನಿವರ್ಧಕ ತೆರವು ಸೂಚನೆ ಬೆನ್ನಲ್ಲೇ ಉತ್ತರ ಪ್ರದೇಶದ ಝಾನ್ಸಿಯಲ್ಲಿ ದೇವಳ ಮತ್ತು ಮಸೀದಿಗಳಿಂದ ಸ್ವಯಂಪ್ರೇರಿತವಾಗಿ ಧ್ವನಿವರ್ಧಕ ತೆರವುಗೊಳಿಸಲಾಗಿದೆ. ಆ ಮೂಲಕ ಧಾರ್ಮಿಕ ಕೇಂದ್ರಗಳೆರಡು ಸೌಹಾರ್ದಕ್ಕೆ ಮಾದರಿಯಾಗಿದೆ.
ಉತ್ತರ ಪ್ರದೇಶ ಸರ್ಕಾರ ರಾಜ್ಯದ ಎಲ್ಲಾ 1,565 ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಿ ಅಕ್ರಮ ಧ್ವನಿವರ್ಧಕಗಳನ್ನು ತೆರವು ಮಾಡುವಂತೆ ಸೂಚಿಸಿತ್ತು. ಇದರ ಬೆನ್ನಲ್ಲೇ ಝಾನ್ಸಿಯ ಗಾಂಧಿ ಚೌಕ್ನಲ್ಲಿರುವ ರಾಮ-ಜಾನಕಿ ದೇವಸ್ಥಾನ ಮತ್ತು ಸುನ್ನಿ ಜಾಮಾ ಮಸೀದಿಯಲ್ಲಿ ಅಳವಡಿಸಲಾದ ಧ್ವನಿವರ್ಧಕಗಳನ್ನು ಸ್ವತಃ ಎರಡೂ ಧಾರ್ಮಿಕ ಕೇಂದ್ರಗಳ ಆಡಳಿತ ಮಂಡಳಿಯವರೇ ತೆರವುಗೊಳಿಸಿದ್ದಾರೆ.
ಈ ಎರಡೂ ಧಾರ್ಮಿಕ ಕೇಂದ್ರಗಳು ಕೆಲವೇ ಮೀಟರ್ಗಳಷ್ಟು ಹತ್ತಿರದಲ್ಲಿದ್ದು, ದೇವಳದಲ್ಲಿ ಬೆಳಗ್ಗೆ ಮತ್ತು ಸಂಜೆ ಆರತಿಯನ್ನು ಧ್ವನಿವರ್ಧಕದಲ್ಲಿ ಪ್ರಸಾರ ಮಾಡಿದರೆ, ಮಸೀದಿಯಿಂದ ಐದು ಬಾರಿ ಆಜಾನ್ ಮಾಡಲಾಗುತ್ತಿತ್ತು. ಸದ್ಯ ದೇವಳದಲ್ಲಿ ಆರತಿ, ಭಜನೆಗಳನ್ನು ಧ್ವನಿವರ್ಧಕ ಇಲ್ಲದೆ ದೇವಳದಲ್ಲಿ ನಡೆಸಲಾಗುತ್ತದೆ. ಮಸೀದಿಯೊಳಗೆ ಸಣ್ಣ ಸ್ಪೀಕರ್ ಇದ್ದು, ಆಜಾನ್ ಶಬ್ದ ಹೊರಗೆ ಕೇಳಿಸದಂತೆ ನೋಡಿಕೊಳ್ಳಲಾಗುತ್ತಿದೆ. ಎಂದು ಎರಡೂ ಧಾರ್ಮಿಕ ಕೇಂದ್ರಗಳ ಪ್ರಮುಖರು ತಿಳಿಸಿದ್ದಾರೆ.
ಜನರ ನಡುವೆ ಸೌಹಾರ್ದತೆ ಮುಖ್ಯ. ಸಹಬಾಳ್ವೆಯಿಂದ ಬದುಕಲು ಎಲ್ಲರಿಗೂ ಅನುವು ಮಾಡಿಕೊಡಬೇಕು ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೇವಾಲಯದ ಅರ್ಚಕ ಶಾಂತಿ ಮೋಹನ್ ದಾಸ್ ಮತ್ತು ಸುನ್ನಿ ಜಾಮಾ ಮಸೀದಿಯ ಹಫೀಜ್ ತಾಜ್ ಆಲಂ ಅವರು ತಿಳಿಸಿದ್ದಾರೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.