ಲಕ್ನೋ, ಏ 27 (DaijiworldNews/DB): ಸಚಿವರು, ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಕುಟುಂಬ ಸದಸ್ಯರು ಪ್ರತಿ ವರ್ಷ ತಮ್ಮ ಆಸ್ತಿ ವಿವರಗಳನ್ನು ಸರ್ಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕೆಂಬ ಹೊಸ ನಿಯಮ ಜಾರಿಗೊಳಿಸಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಮಹತ್ವದ ನಿಯಮ ಜಾರಿಗೊಳಿಸಲು ಮುಂದಾಗಿದ್ದು, ಸದ್ಯದಲ್ಲೇ ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ ಈ ಕುರಿತ ವಿವರಣೆ ಪ್ರಕಟವಾಗಲಿದೆ. ಸಚಿವಾಲಯದ ಕಾರ್ಯವೈಖರಿಯಲ್ಲಿ ಕುಟುಂಬ ಸದಸ್ಯರು ಪಾಲ್ಗೊಳ್ಳುವಂತಿಲ್ಲ. ಸಚಿವರು ಜನ ಸಂಪರ್ಕವನ್ನು ನಿರಂತರವಾಗಿ ಇಟ್ಟುಕೊಳ್ಳಬೇಕು. ಇದಕ್ಕಾಗಿ ವೇಳಾಪಟ್ಟಿ ಸಿದ್ದಪಡಿಸಿ ಅದರಂತೆ ಕಾರ್ಯನಿರ್ವಹಿಸಲು ಸದ್ಯದಲ್ಲೇ ಸೂಚನೆ ಬರಲಿದೆ ಎಂದೂ ಸರ್ಕಾರ ಹೇಳಿದೆ.
ಆದರೆ ಉತ್ತರ ಪ್ರದೇಶದ ಈ ನೂತನ ನಿರ್ಧಾರವನ್ನು ಟೀಕಿಸಿರುವ ಸಮಾಜವಾದಿ ಪಾರ್ಟಿ, ಕೇಂದ್ರ ಸರ್ಕಾರವೂ ಹಿಂದೆ ಇದೇ ರೀತಿ ಸೂಚಿಸಿತ್ತು. ಆದರೆ ಈವರೆಗೆ ಯಾವೊಬ್ಬ ಸಚಿವರೂ ತಮ್ಮ ಆಸ್ತಿ ವಿವರವನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ ಎಂದಿದ್ದಾರೆ.