ನವದೆಹಲಿ, ಏ 26 (DaijiworldNews/MS): ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ಕರ್ನಾಟಕ ಹೈಕೋರ್ಟ್ ತೀರ್ಪಿನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಇನ್ನೆರಡು ದಿನ ಕಾಯುವಂತೆ ಅರ್ಜಿದಾರರಿಗೆ ತಿಳಿಸಿದೆ.
ಮೇಲ್ಮನವಿದಾರರ ಪರವಾಗಿ ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಪ್ರಕರಣ ಪಟ್ಟಿ ಮಾಡುವಂತೆ ಪ್ರಸ್ತಾಪಿಸಿದಾಗ “ಇಂದು ಪ್ರಕರಣ ಆಲಿಸುವುದಿಲ್ಲ. ದಯವಿಟ್ಟು ಎರಡು ದಿನ ಕಾಯಿರಿ” ಎಂದು ಚೀಫ್ ಜಸ್ಟೀಸ್ ಎನ್ ವಿ ರಮಣ ತಿಳಿಸಿದ್ದಾರೆ.
ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ (ಶಿರವಸ್ತ್ರ) ಧರಿಸುವುದನ್ನು ನಿಷೇಧಿಸುವ ಕುರಿತಂತೆ ರಾಜ್ಯದ ಸರ್ಕಾರಿ ಕಾಲೇಜುಗಳ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ (ಸಿಡಿಸಿ) ಅಧಿಕಾರ ನೀಡುವ ಕರ್ನಾಟಕ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಮಾರ್ಚ್ 15 ರಂದು ಎತ್ತಿಹಿಡಿದಿತ್ತು.
ಹಿಜಾಬ್ ಅಥವಾ ತಲೆಗೆ ಸ್ಕಾರ್ಫ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಸಂಪ್ರದಾಯಗಳಲ್ಲಿ ಒಂದಾಗಿದೆ. ಸರ್ಕಾರ ಮಲತಾಯಿ ಧೋರಣೆ ತಳೆಯುವ ಮೂಲಕ ವಿದ್ಯಾರ್ಥಿಗಳ ಧಾರ್ಮಿಕ ನಂಬಿಕೆಯನ್ನು ಹತ್ತಿಕ್ಕುವ ಕಾರ್ಯ ಇದಾಗಿದ್ದು, ಇದರ ಪರಿಣಾಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತೆ ಮಾಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿ ಮೇಲ್ಮನವಿ ಸಲ್ಲಿಸಿದ್ದರು.