ನವದೆಹಲಿ, ಏ 26 (DaijiworldNews/MS): ದೇಶದ ಅತ್ಯಂತ ಜನಪ್ರಿಯ ಚುನಾವಣಾ ನೀತಿ ತಜ್ಞ ಪ್ರಶಾಂತ್ ಕಿಶೋರ್ ಅವರಿಗೆ ತಮ್ಮ ಪಕ್ಷಕ್ಕೆ ಸೇರುವಂತೆ ಕಾಂಗ್ರೆಸ್ ಕೋರಿದ್ದ ಪ್ರಸ್ತಾಪ ನಿರಾಕರಿಸಿದ್ದಾರೆ.
2024 ರ ಲೋಕಸಭೆ ಚುನಾವಣೆ ಸೇರಿದಂತೆ ಮುಂಬರುವ ವಿವಿಧ ಚುನಾವಣೆಗಳಲ್ಲಿ ಕೆಲಸ ಮಾಡಲು ಚುನಾವಣಾ ತಂತ್ರಗಾರ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹಗಳಿಗೆ ತೆರೆಬಿದ್ದಿದ್ದು, ಪಕ್ಷ ಸೇರುವ ಪ್ರಸ್ತಾಪವನ್ನು ಪ್ರಶಾಂತ್ ಕಿಶೋರ್ ನಿರಾಕರಿಸಿದ್ದಾರೆ ಎಂದು ಕಾಂಗ್ರೆಸ್ ಮಂಗಳವಾರ ಪ್ರಕಟಿಸಿದೆ.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಡುವೆ ಅಂತಿಮ ಮಾತುಕತೆ ಬಳಿಕ, ಪ್ರಶಾಂತ್ ಕಿಶೋರ್ ಅವರ ಕಾಂಗ್ರೆಸ್ ಸೇರ್ಪಡೆ ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎಂಬ ವದಂತಿ ಹಬ್ಬಿತ್ತು. ಆದರೆ ಪಕ್ಷಕ್ಕೆ ಸೇರ್ಪಡೆಯಾಗುವ ಪ್ರಸ್ತಾಪವನ್ನು ಪ್ರಶಾಂತ್ ಕಿಶೋರ್ ನಿರಾಕರಿಸಿದ್ದು, ಪಕ್ಷಕ್ಕೆ ಅವರು ನೀಡಿದ ಸಲಹೆಯನ್ನು ನಾವು ಪ್ರಶಂಸಿಸುತ್ತೇವೆ ಎಂದು
ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.