ಬೆಂಗಳೂರು, ಏ 26 (DaijiworldNews/MS): ಗೃಹ ಸಚಿವರಾದ ಜ್ಞಾನೇಂದ್ರ ಅರಗ ನನ್ನ ಮೇಲೆ ಆಸಕ್ತಿ ತೋರಿಸುವ ಬದಲು, ತನಿಖೆಯಲ್ಲಿ ಆಸಕ್ತಿಯನ್ನು ತೋರಿಸಿದರೆ ಒಳ್ಳೆಯದು ಎಂದು ಟ್ವಿಟರ್ ಮೂಲಕ ಪ್ರಿಯಾಂಕಾ ಖರ್ಗೆ ಟಾಂಗ್ ಕೊಟ್ಟಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ, ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೋಡಿದ್ದು , ತನಿಖೆಗೆ ಸಹಕರಿಸದೆ ಪ್ರಿಯಾಂಕ್ ಖರ್ಗೆಯಿಂದ ಪಲಾಯನವಾದ ಮಾಡುತ್ತಿದ್ದಾರೆ ಎಂದು ಗೃಹ ಸಚಿವರಾದ ಅರಗ ಜ್ಞಾನೇಂದ್ರ ಆರೋಪಿಸಿದ್ದರು.
ಇದಕ್ಕೆ ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿರುವ, ಅವರು " ಗೃಹ ಖಾತೆ ನನ್ನ ಸಾಮರ್ಥ್ಯಕ್ಕೆ ಮೀರಿದ ಜವಾಬ್ದಾರಿ, ನನಗೆ ನಿದ್ದೆ ಬರುತ್ತಿಲ್ಲ, ಕಾಂಗ್ರೆಸ್ನವರು ನನ್ನನ್ನು ರೇಪ್ ಮಾಡ್ತಿದ್ದಾರೆ, ಸಂತ್ರಸ್ತೆ ಸಂಜೆ ಸಮಯದಲ್ಲಿ ಅಲ್ಲಿಗೇಕೆ ಹೋಗಿದ್ದಳು? ಪೊಲೀಸರು ಎಂಜಲು ಕಾಸು ತಿಂದು ಮಲಗುತ್ತಾರೆ, ಚಂದ್ರು ಹತ್ಯೆ ಭಾಷೆ ಕಾರಣಕ್ಕಾಗಿದ್ದು ಎಂಬ ಹೇಳಿಕೆ, ನಂತರ ವಿಷಾದ! ಇವೆಲ್ಲವೂ ಮಾನ್ಯ ಗೃಹಸಚಿವರಾದ ಅರಗ ಅವರ ಬಾಲಿಶತನದ ಮಾತುಗಳು, ಅವರು ಒಮ್ಮೆ ಯಾರು ಬಾಲಿಶವಾಗಿ ಮಾತನಾಡುವುದು ಎಂದು ಆತ್ಮಾವಲೋಕನ ಮಾಡಿಕೊಂಡರೆ ಒಳ್ಳೆಯದು. ಆತ್ಮಾವಲೋಕನ ಸಾಧ್ಯವಿಲ್ಲದಿದ್ದರೆ ಶಾಸಕರಾದ ಯತ್ನಾಳ್ ಅವರಲ್ಲಿ ಗೃಹಸಚಿವರು ವಿಚಾರಿಸಿದರೆ ಯಾರದ್ದು ಬಾಲಿಶತನ, ಅಸಾಮರ್ಥ್ಯ ಎಂಬುದು ಸ್ಪಷ್ಟವಾಗಿ ತಿಳಿಯಲಿದೆ! ಎಂದು ವ್ಯಂಗ್ಯವಾಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ನನ್ನ ಮೇಲೆ ಆಸಕ್ತಿ ತೋರಿಸುವ ಬದಲು, ತನಿಖೆಯಲ್ಲಿ ಆಸಕ್ತಿಯನ್ನು ತೋರಿಸಿ. ಪರೀಕ್ಷೆ ಬರೆದ 57,000 ಅಭ್ಯರ್ಥಿಗಳನ್ನು ಉತ್ತರಿಸಿ. ಹೆಚ್ಚಿನ ಅಭ್ಯರ್ಥಿಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬದವರು. ಅವರು ಪರೀಕ್ಷೆ ಬರೆಯಲು ಬಹಳ ಕಷ್ಟಗಳನ್ನು ಕಂಡಿದ್ದಾರೆ. ಇವರಿಗೆ ನ್ಯಾಯ ಕೊಡಿಸಿ ಎಂದು ಹೇಳಿದ್ದಾರೆ.