ನವದೆಹಲಿ, ಏ 26 (DaijiworldNews/MS): ಮಹತ್ವದ ಬೆಳವಣಿಗೆಯಲ್ಲಿ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) 6 ರಿಂದ 12 ವರ್ಷ ವಯಸ್ಸಿನ ಮಕ್ಕಳಲ್ಲಿ ತುರ್ತು ಬಳಕೆಗಾಗಿ ಭಾರತ್ ಬಯೋಟೆಕ್ನ ಕೋವಾಕ್ಸಿನ್ ಅನ್ನು ಅನುಮೋದಿಸಿದೆ. ಇದು ದೇಶದ ಕೋವಿಡ್-19 ಲಸಿಕಾ ಅಭಿಯಾನದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಶಾಲೆಗೆ ಹೋಗುವ ಪುಟ್ಟ ಮಕ್ಕಳಿಗೆ ಈ ಲಸಿಕೆಯೂ ಪ್ರಯೋಜನಕಾರಿಯಾಗಿದೆ ಎಂದು ಬಣ್ಣಿಸಲಾಗಿದೆ.
ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ (DCGI) ನುರಿತ ತಜ್ಞರ ಸಮಿತಿಯು (SEC) ಭಾರತ್ ಬಯೋಟೆಕ್ಗೆ ಕೋವಿಡ್ -19 ಲಸಿಕೆ ಕೋವಾಕ್ಸಿನ್ 2-12 ವರ್ಷ ವಯಸ್ಸಿನ ಮಕ್ಕಳಿಗೆ ನೀಡುವುದಕ್ಕಾಗಿ ಹೆಚ್ಚುವರಿ ಡೇಟಾವನ್ನು ಕೇಳಿದ ನಂತರ ಮಹತ್ವದ ಬೆಳವಣಿಗೆ ಇದಾಗಿದೆ.
ಈಗಾಗಲೇ ಕಾರ್ಬೆವಾಕ್ಸ್ ಲಸಿಕೆಯನ್ನು ಪ್ರಸ್ತುತ 12-14 ವರ್ಷ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತಿದೆ. 15-18 ವರ್ಷ ವಯೋಮಾನದ ಮಕ್ಕಳಿಗೆ ಲಸಿಕೆ ಹಾಕುವ ಅಭಿಯಾನ ಈ ವರ್ಷ ಜನವರಿ 3 ರಂದು ಆರಂಭವಾಗಿದೆ. ಒಟ್ಟಾರೆಯಾಗಿ, ಭಾರತವು ಪ್ರಸ್ತುತ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಎರಡು ಕೋವಿಡ್-19 ಲಸಿಕೆಗಳನ್ನು ನೀಡುತ್ತಿದೆ.
ಈ ನಡುವೆ ದೇಶದಲ್ಲಿ ಕೊರೊನಾ 4 ನೇ ಅಲೆ ಆತಂಕದ ನಡುವೆಯೇ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 2,483 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ.