ಬೆಂಗಳೂರು, ಏ 26 (DaijiworldNews/SM): ಕಳೆದ ಕೆಲವು ತಿಂಗಳುಗಳಿಂದ ರಾಜ್ಯದೆಲ್ಲೆಡೆ ನಿಯಂತ್ರಣಕ್ಕೆ ಬಂದಿದ್ದ ಕೊರೋನಾ ಪ್ರಕರಣಗಳು ಅಲ್ಪ ಜೀವ ಪಡೆದುಕೊಂಡಿದೆ. ಸೋಂಕು ಇಳಿಕೆಯಾಗಿದ್ದ ಹಿನ್ನೆಲೆಯಲ್ಲಿ ನಿಯಂತ್ರಣ ಕ್ರಮಗಳು ಕೂಡ ಸಡಿಲಗೊಂಡಿತ್ತು. ಇದೀಗ ಮತ್ತೆ ಕೆಲವು ನಿರ್ಬಂಧಗಳತ್ತ ಸರಕಾರ ಮುಖಮಾಡಿದೆ.
ದೆಹಲಿ, ಹರಿಯಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರತಿದಿನ ಸ್ವಲ್ಪ ಹೆಚ್ಚಳವಾಗುತ್ತಿವೆ. ಅಲ್ಲದೆ ಕರ್ನಾಟಕದಲ್ಲಿಯೂ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿವೆ. ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ದೆಹಲಿ, ಹರಿಯಾಣ ಮತ್ತು ತಮಿಳುನಾಡು ರಾಜ್ಯಗಳು ಮಾಸ್ಕ್ ಧರಿಸಲು ಮತ್ತೆ ಸೂಚಿಸಲಾಗಿದೆ. ಇದರ ಅನುಸರಣೆ ಮಾಡದಿದ್ದರೆ ದಂಡ ಪ್ರಯೋಗಕ್ಕೆ ಆದೇಶಿಸಿದೆ.
ಪೂರ್ವಭಾವಿ ಹೆಜ್ಜೆಯಾಗಿ ಕೋವಿಡ್ ಪ್ರಕರಣಗಳ ಉಲ್ಬಣವನ್ನು ಕಡಿಮೆ ಮಾಡಲು, ರಾಜ್ಯ ಕೋವಿಡ್- 19 ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಮಾರ್ಗಸೂಚಿ ಆದೇಶವನ್ನು ಹೊರಡಿಸಲಾಗಿದೆ.
ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಮತ್ತು ಪ್ರಯಾಣ ಸಮಯದಲ್ಲಿ ಜನರು ಮುಖ ಕವಚ/ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ.