ವಿಜಯಪುರ, ಏ 25 (DaijiworldNews/DB): ಸಂಪುಟ ವಿಸ್ತರಣೆ ವೇಳೆ ಪಕ್ಷದ ನಿರ್ಧಾರಕ್ಕೆ ನಾನು ಬದ್ದ. ಸಚಿವ ಸ್ಥಾನವನ್ನು ನಾನೆಂದೂ ಗೋಗರೆದು ಪಡೆದುಕೊಂಡಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹಿರಿಯ ಸಚಿವರನ್ನು ಕೈ ಬಿಡುವ ವಿಚಾರ ನನಗೆ ತಿಳಿದಿಲ್ಲ. ನಾನೆಂದೂ ಪಕ್ಷದ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡಿದ್ದೇನೆ. ಸಚಿವ ಸ್ಥಾನ ನನಗೆ ಪಕ್ಷದ ಹಿರಿಯರಿಂದ ಒಲಿದು ಬಂದಿದೆಯೇ ಹೊರತು ನಾನಾಗಿ ಬೇಡಿ, ಗೋಗರೆದು ಪಡೆದುಕೊಂಡಿಲ್ಲ. ಮುಂದೆಯೂ ಪಕ್ಷ ಯಾವ ನಿರ್ಧಾರ ತೆಗೆದುಕೊಂಡರೂ ನಾನದಕ್ಕೆ ಬದ್ದನಾಗಿರುತ್ತೇನೆ ಎಂದರು.
ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರವು ಮುಖ್ಯಮಂತ್ರಿಯವರಿಗೆ ಬಿಟ್ಟದ್ದಾಗಿದೆ. ಪಕ್ಷವನ್ನು ತಾಯಿ ಎಂದೇ ಪರಿಭಾವಿಸಿದವನು ನಾನು. ವಿಜಯಪುರ ಜಿಲ್ಲೆಗೆ ಸಂಪುಟ ವಿಸ್ತರಣೆಯಲ್ಲಿ ಆದ್ಯತೆ ಸಿಗಲಿದೆಯೇ ಗೊತ್ತಿಲ್ಲ. ಎಲ್ಲವೂ ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟದ್ದಾಗಿದೆ. ಪಕ್ಷದ ನಿರ್ಧಾರವನ್ನು ವಿರೋಧಿಸದೆ ಸ್ವೀಕರಿಸುವ ಗುಣ ನನ್ನದು ಎಂದವರು ತಿಳಿಸಿದರು.