ಬೆಂಗಳೂರು, ಏ 25 (DaijiworldNews/MS): ರಾಜ್ಯವನ್ನು ಭ್ರಷ್ಟಾಚಾರದಿಂದ ರಕ್ಷಿಸಬೇಕಿದೆ ಎಂದು ಕೆಪಿಸಿಸಿಯ ಭ್ರಷ್ಟಾಧ್ಯಕ್ಷರು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಎಂದು ರಾಜ್ಯ ಬಿಜೆಪಿ ಘಟಕ ಲೇವಡಿ ಮಾಡಿದೆ.
ಕರ್ನಾಟಕದಲ್ಲಿ ಭಾರೀ ಸಂಚಲನ ಮೂಡಿಸಿರುವ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ, ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡಿದ ವಿಚಾರವಾಗಿ ಕಾಂಗ್ರೆಸ್ ಮುಖಂಡರು ಮಾಡಿದ ಟ್ವೀಟ್ ಗೆ ತಿರುಗೇಟು ನೀಡಿರುವ , ಬಿಜೆಪಿಯೂ, ಮಾನ್ಯ ಡಿಕೆ ಅವರೇ, ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾಧಿಕಾರಿಗಳು ನೀಡುವ ನೋಟಿಸ್ಗೆ ಹಲವು ಆಯಾಮಗಳಿರುತ್ತವೆ. ಎಲ್ಲವನ್ನೂ ನಿಮ್ಮ ನೆಲೆಯಲ್ಲಿ ಸ್ವೀಕರಿಸಿ ಭೀತಿಗೆ ಒಳಗಾಗಬೇಡಿ. ಹಗರಣಕ್ಕೆ ಸಂಬಂಧಪಟ್ಟಂತೆ ಇರುವ ಮಾಹಿತಿ ನೀಡಿ ಎಂದು ನೋಟಿಸ್ ನೀಡುವುದು ದಂಡಪ್ರಕ್ರಿಯಾ ಸಂಹಿತೆಯ ಭಾಗ ಅಷ್ಟೇ ಎಂದು ವ್ಯಂಗ್ಯವಾಡಿದೆ.
ರಾಜ್ಯವನ್ನು ಭ್ರಷ್ಟಾಚಾರದಿಂದ ರಕ್ಷಿಸಬೇಕಿದೆ ಎಂದು ಕೆಪಿಸಿಸಿಯ ಭ್ರಷ್ಟಾಧ್ಯಕ್ಷರು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ.ಇದಕ್ಕಾಗಿಯೇ ಕಾಂಗ್ರೆಸ್ಸಿಗರನ್ನು ತಾನು ಕಳ್ಳ ಪರರ ನಂಬ ಶ್ರೇಣಿಗೆ ಸೇರಿಸಿರುವುದು.ಪರಮ ಭ್ರಷ್ಟಾಚಾರಿಯೊಬ್ಬ ಶುದ್ಧಾಚಾರದ ಮಾತಾಡುವುದು ಚೋದ್ಯವಲ್ಲದೆ ಮತ್ತೇನು? ಎಂದು ಪ್ರಶ್ನಿಸಿದೆ.
ಪಿಎಸ್ಐ ನೇಮಕ ಹಗರಣದ ಶಂಕಿತರ ಜೊತೆಗೆ ನಾವಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಭ್ರಷ್ಟಾಧ್ಯಕ್ಷ ಡಿ.ಕೆ ಶಿವಕುಮಾರ್ ಅವರೇ ಈ ಹಗರಣದ ಆರೋಪಿ, ಶಂಕಿತರು ಹಾಗೂ ಫಲಾನುಭವಿಗಳೆಲ್ಲರೂ ಕಾಂಗ್ರೆಸಿಗರು. ಹೀಗಾಗಿ ಕಾಂಗ್ರೆಸ್ ಸಾಥ್ ನೀಡಲೇಬೇಕಲ್ಲವೇ? ಎಂದು ವ್ಯಂಗ್ಯವಾಡಿದೆ.