ನವದೆಹಲಿ, ಏ 25 (DaijiworldNews/MS): ದೆಹಲಿಯ ಸತ್ಯನಿಕೇತನ ಪ್ರದೇಶದ ಬಳಿ ನಿರ್ಮಾಣ ಹಂತದ ಕಟ್ಟಡ ಕುಸಿದಿದ್ದು, ಅವಶೇಷದಡಿ ಸಿಲುಕಿಕೊಂಡಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಈ ಪೈಕಿ ಮೂವರನ್ನು ರಕ್ಷಿಸಲಾಗಿದೆ.
ಸೋಮವಾರ ಮಧ್ಯಾಹ್ನ 1.24ರ ಸುಮಾರಿಗೆ ಕಟ್ಟಡ ಧರಾಶಾಹಿಯಾಗಿದ್ದು, ಸುದ್ದಿ ತಿಳಿದ ಕೂಡಲೇ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಟ್ಟಡದೊಳಗೆ ಸಿಲುಕಿರುವವರ ರಕ್ಷಣೆಯಲ್ಲಿ ತೊಡಗಿದೆ. ಐವರು ಕಾರ್ಮಿಕರು ಕಟ್ಟಡದೊಳಗೆ ಸಿಲುಕಿರುವ ಮಾಹಿತಿ ಲಭ್ಯವಾಗಿದ್ದು, ಈ ಪೈಕಿ ಮೂವರು ಕಟ್ಟಡ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
ಎಷ್ಟು ಕಾರ್ಮಿಕರು ಸಿಲುಕಿದ್ದಾರೆ ಎಂಬ ನಿಖರ ಮಾಹಿತಿ ಇನ್ನು ಅಗ್ನಿಶಾಮಕ ದಳಕ್ಕೆ ದೊರಕಿಲ್ಲ. ನಮ್ಮ ಸಿಬ್ಬಂದಿಗಳ ಜೊತೆಗೆ ಪೊಲೀಸರು ಕೂಡಾ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅಗ್ನಿಶಾಮಕ ಸಿಬ್ಬಂದಿ ನಿರ್ದೇಶಕ ಅತುಲ್ ಗಾರ್ಗ್ ತಿಳಿಸಿದ್ದಾರೆ.
ಕಟ್ಟಡ ನಿರ್ಮಾಣದ ಕಾಮಗಾರಿ ಸರಿಯಿಲ್ಲ ಈ ಬಗ್ಗೆ ಮಾರ್ಚ್ ತಿಂಗಳಲ್ಲೇ ನೊಟೀಸ್ ನೀಡಲಾಗಿತ್ತು. ಆದರೂ ಕಾಮಗಾರಿ ಮುಂದುವರಿಸಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಅವರು ತಿಳಿಸಿದರು.