ನವದೆಹಲಿ, ಏ 25 (DaijiworldNews/HR): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸೋಮವಾರ ದೆಹಲಿ ಶಾಲೆಯೊಂದರಲ್ಲಿ "ಮೈಂಡ್ಫುಲ್ನೆಸ್ ಕ್ಲಾಸ್" ಗೆ ಹಾಜರಾಗಿದ್ದರು.
ಈ ಕುರಿತು ಆಮ್ ಆದ್ಮಿ ಪಕ್ಷವು ಪೋಸ್ಟ್ ವೊಂದನ್ನು ಟ್ವೀಟ್ ಮಾಡಿದ್ದು, ಅದರಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಇಬ್ಬರು ರಾಜಕಾರಣಿಗಳು ಮಕ್ಕಳೊಂದಿಗೆ ಮಾತನಾಡುತ್ತ ಆನಂದಿಸುತ್ತಿರುವುದನ್ನು ಕಾಣಬಹುದು.
ಪಂಜಾಬ್ ಸರ್ಕಾರವು ದೆಹಲಿಯ ಶಿಕ್ಷಣ ಮಾದರಿಯನ್ನು ರಾಜ್ಯದಲ್ಲಿ ಪುನರಾವರ್ತಿಸಲಿದ್ದು, ಅಲ್ಲಿ ಎಲ್ಲಾ ಆರ್ಥಿಕ ಹಿನ್ನೆಲೆಯ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಾರೆ ಎಂದು ಭಗವಂತ್ ಮಾನ್ ಹೇಳಿದ್ದಾರೆ.
ತನ್ನ ಹಿರಿಯ ಅಧಿಕಾರಿಗಳೊಂದಿಗೆ ದೆಹಲಿಗೆ ಎರಡು ದಿನಗಳ ಭೇಟಿಯಲ್ಲಿರುವ ಶ್ರೀ ಮಾನ್, "ದೆಹಲಿ ಮಾದರಿ" ಯನ್ನು ಅರ್ಥಮಾಡಿಕೊಳ್ಳಲು ಮತ್ತು ರಾಜ್ಯದಲ್ಲಿ ಅದನ್ನು ಪುನರಾವರ್ತಿಸಲು ರಾಷ್ಟ್ರ ರಾಜಧಾನಿಯ ಆರೋಗ್ಯ ಸಂಸ್ಥೆಗಳು ಮತ್ತು ಶಾಲೆಗಳಿಗೆ ಪ್ರವಾಸ ಮಾಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಚಿರಾಗ್ ಎನ್ಕ್ಲೇವ್ನಲ್ಲಿರುವ ದೆಹಲಿ ಸರ್ಕಾರಿ ಶಾಲೆಗೆ ಶ್ರೀ ಮಾನ್ ಅವರೊಂದಿಗೆ ತೆರಳಿದ್ದಾರೆ.