ಬೆಂಗಳೂರು, ಏ 25 (DaijiworldNews/DB): ನಿದ್ದೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮೂವರು ವಿದ್ಯಾರ್ಥಿಗಳು ಶಿಕ್ಷಕನ ಮೇಲೆ ಹಲ್ಲೆಗೆ ಯತ್ನಿಸಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಘಟನೆಯ ವೀಡಿಯೋ ವೈರಲ್ ಆಗಿದ್ದು, ವಿದ್ಯಾರ್ಥಿಗಳ ದುರ್ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.
ಮಾದನೂರ್ ಗ್ರಾಮದ ಸರ್ಕಾರಿ ಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಪಾಠ ಶಿಕ್ಷಕ ಸಂಜಯ್ ಗಾಂಧಿ 12 ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾಗ ಮಾರಿ ಎಂಬ ವಿದ್ಯಾರ್ಥಿ ನಿದ್ದೆಗೆ ಶರಣಾಗಿದ್ದ. ಇದನ್ನು ಪ್ರಶ್ನಿಸಿದ ಶಿಕ್ಷಕನ ಮೇಲೆ ಆತ ಮತ್ತು ಇಬ್ಬರು ಸಹಪಾಠಿಗಳು ಸೇರಿ ಹಲ್ಲೆಗೆ ಮುಂದಾಗಿದ್ದಾರೆ. ಬಟ್ಟೆ ಬಿಚ್ಚಿ ಶಿಕ್ಷಕನೆದುರು ಅಸಭ್ಯವಾಗಿ ನಡೆದುಕೊಂಡಿದ್ದಾರೆ.
ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಅಂಬೂರು ವಲಯದ ಪೊಲೀಸ್ ಸಿಬಂದಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲು ಸೂಚಿಸಿದ್ದಾರೆ. ಹೀಗಾಗಿ ಮಾರಿ ಸಹಿತ ಮೂವರನ್ನು ಶಾಲಾ ಆಡಳಿತ ಮಂಡಳಿ ಅಮಾನತುಗೊಳಿಸಿದೆ ಎಂದು ವರದಿಯಾಗಿದೆ.