ಬೆಂಗಳೂರು, ಏ 25 (DaijiworldNews/DB): ಪಿಎಸ್ಐ ನೇಮಕಾತಿ ಹಗರಣದ ಆರೋಪಿ ದಿವ್ಯಾ ಹಾಗರಗಿ ಮನೆಗೆ ಹೋಗಿ ಬಂದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ವಿಚಾರಣೆಗೆ ಒಳಪಡಿಸಿ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಸಚಿವ ಸುನೀಲ್ ಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ನನ್ನನ್ನು ವಿಚಾರಣೆಗೊಳಪಡಿಸುವಂತೆ ಸಚಿವ ಸುನಿಲ್ಕುಮಾರ್ ಒತ್ತಾಯಿಸುತ್ತಿದ್ದಾರೆ. ಆದರೆ ನನಗಿಂತ ಮೊದಲು ದಿವ್ಯಾ ಹಾಗರಗಿ ಮನೆಯಲ್ಲಿ ಗೋಡಂಬಿ ಸವಿದು ಬಂದ ಅವರದೇ ಪಕ್ಷದ ಗೃಹಸಚಿವರನ್ನು ವಿಚಾರಣೆ ನಡೆಸಬೇಕಾದ ಅಗತ್ಯವಿದೆ. ಗೃಹ ಸಚಿವರ ಬಳಿ ಅಕ್ರಮದ ಮಾಹಿತಿ ಇಲ್ಲವೇ ಎಂದು ಪ್ರಶ್ನಿಸಿದರು.
ಅಕ್ರಮದ ಮಾಹಿತಿ ಕೇಳಿ ಸಿಐಡಿಯಿಂದ ನನಗೆ ನಿನ್ನೆ ನೊಟೀಸ್ ಬಂದಿದೆ. ಸರ್ಕಾರದ ಕಾರ್ಯವೈಖರಿ ಏನೆಂಬುದು ಆ ನೊಟೀಸ್ ನೋಡಿದಾಗಲೇ ಗೊತ್ತಾಗುತ್ತದೆ ಎಂದರು.
ಯುವಕರ ಭವಿಷ್ಯದ ಬಗ್ಗೆ ಮಾತನಾಡುವ ರೇಣುಕಾಚಾರ್ಯ ಅವರು ಎಸ್ಸಿ ಸರ್ಟಿಫಿಕೇಟ್ ಪಡೆದು ದಲಿತ ಯುವಕರ ಅವಕಾಶ ಕಿತ್ತುಕೊಂಡವರು ಯಾರು ಎಂಬುದಕ್ಕೆ ಉತ್ತರಿಸಬೇಕು. ಆರೋಪಿ ಮೇಲೆ ಇನ್ನೂ ಎಫ್ಐಆರ್ ಮಾಡದಿರಲು ಕಾರಣವೇನು ಎಂದು ಪ್ರಶ್ನಿಸಿದರು.