ಬೆಂಗಳೂರು, ಏ 25 (DaijiworldNews/HR): ಜಿಲ್ಲಾ ಹಾಲು ಒಕ್ಕೂಟಗಳ ಕೆಲಸಗಾರರ ನೇಮಕದಲ್ಲಿ ಅಕ್ರಮಗಳಾಗಿವೆ ಎಂದು ಆರೋಪಿಸಿ ಕುಮಾರಸ್ವಾಮಿಯವರು ಗಾಳಿಯಲ್ಲಿ ಗೋಪುರ ಕಟ್ಟುವುದು ಬೇಡ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಸಹಕಾರ ಒಕ್ಕೂಟಗಳಲ್ಲಿ ನೇಮಕ ಪಾರದರ್ಶಕವಾಗಿ ನಡೆಯುತ್ತಿಲ್ಲ. ಪ್ರತಿಯೊಂದು ಹುದ್ದೆಗೆ 25 ರಿಂದ 50 ಲಕ್ಷ ರೂ. ಲಂಚ ನಿಗದಿಪಡಿಸಿದ್ದು, ಹಿಂದೆ ಆಡಳಿತ ನಡೆಸಿದವರು, ಈಗ ಆಡಳಿತ ನಡೆಸುತ್ತಿರುವವರಿಗೆ ಇದೆಲ್ಲವೂ ಗೊತ್ತು ಎಂದು ಕುಮಾರಸ್ವಾಮಿ ಆಪಾದಿಸಿದ್ದಾರೆ. ಹಿಂದೆ ಅವರದೇ ನೇತೃತ್ವದ ಸಮ್ಮಿಶ್ರ ಸರ್ಕಾರವಿತ್ತು. ಬಂಡೆಪ್ಪ ಖಾಶೆಂಪುರ ಸಹಕಾರ ಸಚಿವರಾಗಿದ್ದು, ಅವರ ಹಿರಿಯ ಸೋದರ ಎಚ್.ಡಿ.ರೇವಣ್ಣ ಕೆಎಂಎಫ್ ಅಧ್ಯಕ್ಷರಾಗಿದ್ದರು. ಆಗ ಅಕ್ರಮ ತಡೆಯಲು ಪ್ರಯತ್ನಿಸಲಿಲ್ಲವೇಕೆ? ಎಂದು ಪ್ರಶ್ನಿಸಿದ್ದಾರೆ
ಇನ್ನು ಎಲ್ಲ ಹಾಲು ಒಕ್ಕೂಟಗಳಲ್ಲಿ ಅಕ್ರಮಗಳಾಗಿವೆ ಎಂದು ಕುಮಾರಸ್ವಾಮಿ ಹೇಳಿದರೆ ಹೇಗೆ? ಬಹುಶಃ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಆದ ಅಕ್ರಮಗಳನ್ನು ಈಗ ಹೇಳುತ್ತಿರಬಹುದು ಎಂದು ತಿರುಗೇಟು ನೀಡಿದ್ದಾರೆ.