ಬೆಂಗಳೂರು, ಏ 25 (DaijiworldNews/MS):ಕರ್ನಾಟಕದಲ್ಲಿ ಭಾರೀ ಸಂಚಲನ ಮೂಡಿಸಿರುವ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ, ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡಿದ ವಿಚಾರವಾಗಿ ಸಿಡಿಮಿಡಿಕೊಂಡಿಕೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಅವರು , "ಪಿಎಸ್ಐ ನೇಮಕ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ್ದ ಶಾಸಕ ಪ್ರಿಯಾಂಕ ಖರ್ಗೆ ಅವರನ್ನೇ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸುತ್ತಿರುವ ಸಚಿವ ಕಾರ್ಕಳ ಶಾಸಕ ಸುನೀಲ್ ಸ್ಥಿತಿ ‘ತಾ ಕಳ್ಳ, ಇತರರ ನಂಬ’ ಎಂಬಂತಾಗಿದೆ. ಈ ಬೆದರಿಕೆಗೆ ನಾವು ಜಗ್ಗುವುದಿಲ್ಲ. ಖರ್ಗೆಯವರ ಬೆನ್ನಹಿಂದೆ ಕಾಂಗ್ರೆಸ್ ಪಕ್ಷ ಇದೆ ಎಂದು ಹೇಳಿದ್ದಾರೆ
ಸಚಿವ ಸುನೀಲ್ ಕುಮಾರ್ ನೀಡಿದ ಹೇಳಿಕೆಯ ಬೆನ್ನಿನಲ್ಲಿಯೇ ಸಿಐಡಿ ಪೊಲೀಸರು ಪ್ರಿಯಾಂಕ ಖರ್ಗೆ ಅವರ ವಿಚಾರಣೆಗೆ ನೋಟೀಸ್ ನೀಡಿದ್ದನ್ನು ನೋಡಿದರೆ,
ಬಿಜೆಪಿ ನಾಯಕರು ಹಗರಣದ ಬಗ್ಗೆ ಮಾತನಾಡುವವರ ಬಾಯಿಮುಚ್ಚಿಸುವ ಹುನ್ನಾರ ನಡೆಸುತ್ತಿರುವಂತೆ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.
ಅಡಿಯಿಂದ ಮುಡಿವರೆಗೆ 100% ಭ್ರಷ್ಟಾಚಾರದ ಮಸಿ ಬಳಿದುಕೊಂಡಿರುವ ರಾಜ್ಯದ ಬಿಜೆಪಿ ಸರ್ಕಾರವನ್ನು ಸುಳ್ಳುಗಳ ಬಣ್ಣಹೊಡೆದು ಅಳಿಸಲಾಗದು. ಸರ್ಕಾರ, ತನಿಖಾ ಸಂಸ್ಥೆಗಳು ನಿಮ್ಮ ನಿಯಂತ್ರಣದಲ್ಲಿರಬಹುದು, ರಾಜ್ಯದ ಜನತೆ ನಮ್ಮ ಜೊತೆ ಇದ್ದಾರೆ ಎಂದು ಹೇಳಿದ್ದಾರೆ