ದಾವಣಗೆರೆ, ಏ 25 (DaijiworldNews/DB): ಬುಲ್ಡೋಜರ್ ಮಾದರಿ ಪ್ರಯೋಗ ಮಾಡಲು ಕರ್ನಾಟಕ ಉತ್ತರ ಪ್ರದೇಶ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಸೋಮವಾರ ಮಾತನಾಡಿದ ಅವರು, ಉತ್ತರ ಪ್ರದೇಶವನ್ನು ಕರ್ನಾಟಕಕ್ಕೆ ಹೋಲಿಸಬೇಡಿ. ಆ ರಾಜ್ಯದಲ್ಲಿ ಬುಲ್ಡೋಜರ್ ಪ್ರಯೋಗಕ್ಕೆ ನಾನಾ ಕಾರಣಗಳಿವೆ. ಆದರೆ ಕರ್ನಾಟಕದಲ್ಲಿ ಪ್ರಜ್ಞಾವಂತ ಜನಗಳೇ ತುಂಬಿದ್ದಾರೆ ಎಂದರು.
ಆಪರೇಶನ್ ಕಮಲದ ಮೂಲಕ ಬಿಜೆಪಿ ಅಧಿಕಾರ ಹಿಡಿದಿದೆಯೇ ಹೊರತು ಜನಾದೇಶದಿಂದ ಅಲ್ಲ. ಶಾಸಕರನ್ನು ಖರೀದಿ ಮಾಡಿ ಅಧಿಕಾರ ಹಿಡಿದ ಪಕ್ಷ ಅದು. ಸದ್ಯ ಬಿಜೆಪಿ ಯಾಕಾದರೂ ಅಧಿಕರಾದಲ್ಲಿದೆಯೋ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದವರು ತಿಳಿಸಿದರು.
ರಾಜ್ಯದಲ್ಲಿ ಕಾಮಗಾರಿ ನಡೆಸಬೇಕಾದರೆ ಶೇ.40 ಕಮಿಷನ್ ಪಡೆಯುವ ಬಿಜೆಪಿಯವರು ರಾಜ್ಯಕ್ಕೆ ಶಾಶ್ವತ ಕಪ್ಪು ಚುಕ್ಕೆ ಇಡಲು ಹೊರಟಿದ್ದಾರೆ. ಈಗ ಧರ್ಮ ದಂಗಲ್ ಶುರು ಮಾಡಿಕೊಂಡಿದ್ದಾರೆ. ಮುಸಲ್ಮಾನರ ಮೇಲೆ ಬೇಧ ಭಾವ ಮಾಡುವುದು ಸಲ್ಲ. ಅವರಲ್ಲಿಯೂ ಪ್ರಧಾನಿಯಾಗುವ ಅರ್ಹತೆ ಇದೆ. ರಾಷ್ಟ್ರಪತಿ, ವಿಜ್ಞಾನಿ ಹುದ್ದೆಗೇರಿದವರು ಇದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ನಮ್ಮ ಭಾಗದಲ್ಲಿರುವ ಕಬ್ಬಾಳಮ್ಮ ದೇವಸ್ಥಾನದಲ್ಲಿ ಕಡಿಯುವ ಮರಿಗಳನ್ನು ಮುಸ್ಲಿಮರೇ ಶುಚಿಗೊಳಿಸುತ್ತಾರೆ. ರಾಮನಗರದಲ್ಲಿ ಮಾವಿನ ತೋಪಿಗೆ ಔಷಧಿ ಹೊಡೆಯುವರೂ ಅವರೇ. ಮತ್ಯಾಕೆ ಈ ಹಲಾಲ್ ವಿವಾದಗಳನ್ನು ಎಬ್ಬಿಸುತ್ತಿದ್ದಾರೆ ಎಂದವರು ಪ್ರಶ್ನಿಸುತ್ತಿದ್ದಾರೆ.