ನವದೆಹಲಿ, ಏ 25 (DaijiworldNews/DB): ಹಿಂದೂ ದೇವತೆಗಳ ಚಿತ್ರಗಳನ್ನು ಬಿಕಿನಿ ಬಟ್ಟೆಗಳಲ್ಲಿ ಮುದ್ರಿಸಿ ಸಹಾರಾ ರೇ ಸ್ವಿಮ್ ಎಂಬ ಬ್ರಾಂಡ್ ಕಂಪೆನಿಯೊಂದು ಅಮೆಜಾನ್ ಮತ್ತಿತರ ಆನ್ಲೈನ್ ಶಾಪಿಂಗ್ ತಾಣಗಳಲ್ಲಿ ಬಿಡುಗಡೆ ಮಾಡಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.
ಔರಾ ಕಲೆಕ್ಷನ್ 2022 ಎಂಬುದಾಗಿ ಹೊಸದಾಗಿ ಈ ಬಟ್ಟೆಗಳನ್ನು ಆನ್ಲೈನ್ ಶಾಪಿಂಗ್ ತಾಣಗಳಲ್ಲಿ ಬಿಡುಗಡೆ ಮಾಡಲಾಗಿದೆ. ಹಿಂದೂ ದೇವತೆಗಳ ಚಿತ್ರವನ್ನು ಈಜುಡೆಗೆಗಳಲ್ಲಿ ಮುದ್ರಿಸಿರುವುದು ಹಿಂದೂ ಸಮುದಾಯಕ್ಕೆ ಘಾಸಿಯುಂಟು ಮಾಡಿದೆ ಎಂದು ಸಾಮಾಜಿಕ ತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೆಲವರು ಬ್ಯಾನ್ ಅಮೆಜಾನ್ ಹೆಸರಿನಲ್ಲಿ ಅಭಿಯಾನವನ್ನೂ ಶುರು ಮಾಡಿದ್ದಾರೆ.
ಹಿಂದುತ್ವ ಎಂಬುವುದು ಜೋಕ್ ಅಲ್ಲ, ಕಂಪೆನಿಗಳಿಗೆ ಹಣ ಮಾಡುವ ಮಾರ್ಗವೂ ಅಲ್ಲ ಎಂಬುದಾಗಿ ಯುವತಿಯೋರ್ವಳು ಆಕ್ರೋಶದಿಂದ ಬರೆದುಕೊಂಡಿದ್ದಾಳೆ.
ಈ ಕಂಪೆನಿಯು ಹಿಂದೂ ದೇವತೆಗಳ ಚಿತ್ರವನ್ನು ಹೀಗೆ ಕೆಟ್ಟದಾಗಿ ಮುದ್ರಿಸಿರುವುದು ಇದೇ ಮೊದಲಲ್ಲ. ಈ ಹಿಂದೆ ಫ್ಲೋರ್ ಮ್ಯಾಟ್ ಮತ್ತು ಟಾಯ್ಲೆಟ್ ಕವರ್ಗಳ ಮೇಲೆಯೂ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಹೀಗಾಗಿ ಎಲ್ಲವನ್ನೂ ಕಂಪೆನಿ ಉದ್ದೇಶಪೂರ್ವಕವಾಗಿಯೇ ಮಾಡಿದೆ ಎಂದು ನೆಟ್ಟಿಗರು ಆಕ್ರೋಶಿತರಾಗಿದ್ದಾರೆ.