ನವದೆಹಲಿ, ಏ 25 (DaijiworldNews/DB): ಕೇರಳದ ಅಧಿಕಾರಿಗಳು ದೆಹಲಿ ಮಾದರಿಯ ಶಿಕ್ಷಣದ ಬಗ್ಗೆ ಅಧ್ಯಯನ ನಡೆಸಲು ದೆಹಲಿ ಶಾಲೆಗೆ ಭೇಟಿ ನೀಡಿದ್ದರು ಎಂಬುದಾಗಿ ಸುಳ್ಳು ಮಾಹಿತಿ ನೀಡಿದ ಎಎಪಿ ಶಾಸಕಿ ಅತಿಶಿ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿಯು ದೆಹಲಿ ಸರ್ಕಾರವನ್ನು ಒತ್ತಾಯಿಸಿದೆ.
ಕೇರಳ ಅಧಿಕಾರಿಗಳು ದೆಹಲಿ ಮಾದರಿಯ ಶಿಕ್ಷಣ ಕ್ರಮ ಅನುಷ್ಠಾನಕ್ಕೆ ಆಸಕ್ತಿ ಹೊಂದಿದ್ದು, ಶಾಲೆಗೆ ಭೇಟಿ ನೀಡಿದ್ದಾರೆ ಎಂದು ಚಿತ್ರ ಸಮೇತ ಅತಿಶಿ ಟ್ವೀಟರ್ನಲ್ಲಿ ಪ್ರಕಟಿಸಿದ್ದರು. ಈ ಟ್ವೀಟರ್ಗೆ ಪ್ರತಿಕ್ರಿಯಿಸಿದ್ದ ಕೇರಳ ಶಿಕ್ಷಣ ಸಚಿವ ಶಿವನ್ ಕುಟ್ಟಿ, ಕೇರಳಕ್ಕೆ ಯಾವ ಅಧಿಕಾರಿಯೂ ದೆಹಲಿ ಮಾದರಿ ಶಿಕ್ಷಣ ವ್ಯವಸ್ಥೆ ಅಧ್ಯಯನ ಸಲುವಾಗಿ ಹೋಗಿಲ್ಲ ಎಂದು ಬರೆದಿದ್ದರು. ಕೇರಳ ಸಚಿವರಿಂದ ಈ ಸ್ಪಷ್ಟನೆ ಬೆನ್ನಲ್ಲೇ ಬಿಜೆಪಿ, ಸುಳ್ಳು ಮಾಹಿತಿ ನೀಡಿರುವ ಅತಿಶಿ ವಿರುದ್ದ ಕ್ರಮಕ್ಕೆ ಆಗ್ರಹಿಸಿದೆ.
ದೆಹಲಿಯ ಕಲ್ಕಾಜಿಯಲ್ಲಿರುವ ಶಾಲೆಯೊಂದರಲ್ಲಿ ಕೇರಳದ ಅಧಿಕಾರಿಗಳಿಗೆ ಆತಿಥ್ಯ ನೀಡುತ್ತಿರುವುದು ತುಂಬಾ ಸಂತಸದ ವಿಷಯ. ಕೇಜ್ರೀವಾಲ್ ಅವರು ದೆಹಲಿ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದು, ಅದರ ಅಧ್ಯಯನಕ್ಕೆ ಕೇರಳ ಅಧಿಕಾರಿಗಳು ಬಂದಿದ್ದಾರೆ. ತಮ್ಮಲ್ಲಿಯೂ ಇದೇ ಮಾದರಿಯನ್ನು ಅಳವಡಿಸಿಕೊಳ್ಳಲು ಅವರು ಉತ್ಸುಕರಾಗಿದ್ದಾರೆ. ಇದು ಕೇಜ್ರೀವಾಲ್ ಸರ್ಕಾರದ ರಾಷ್ಟ್ರ ನಿರ್ಮಾಣದ ಪರಿಕಲ್ಪನೆ ಎಂದು ಶಾಸಕಿ ಅತಿಶಿ ಬರೆದುಕೊಂಡಿದ್ದರು.
ಆದರೆ ಕೇರಳ ಶಿಕ್ಷಣ ಸಚಿವ ವಿ ಶಿವನ್ಕುಟ್ಟಿ, ದೆಹಲಿ ಮಾದರಿ ಶಿಕ್ಷಣ ಅಧ್ಯಯನಕ್ಕೆ ಕೇರಳದ ಯಾವುದೇ ಅಧಿಕಾರಿಗಳೂ ಭೇಟಿ ನೀಡಿಲ್ಲ. ಕೇರಳ ಮಾದರಿ ಅಧ್ಯಯನಕ್ಕೆ ದೆಹಲಿಯಿಂದ ಕೆಲವು ಅಧಿಕಾರಿಗಳು ಬಂದಿದ್ದು, ಅವರಿಗೆ ನಾವು ಆತಿಥ್ಯ ನೀಡಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದರು.
ಕೇರಳದ ಅಧಿಕೃತ ನಿಯೋಗ ದೆಹಲಿ ಸರ್ಕಾರಿ ಶಾಲೆಗೆ ಭೇಟಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಸ್ಪಷ್ಟಪಡಿಸಬೇಕು. ಇಲ್ಲವಾದರೆ ಸುಳ್ಳು ಹೇಳಿಕೆ ಸಲುವಾಗಿ ಅತಿಶಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಆಗ್ರಹಿಸಿದ್ದಾರೆ.