ಬೆಂಗಳೂರು, ಏ 25 (DaijiworldNews/DB): ಬೇರೊಬ್ಬನೊಂದಿಗೆ ಮದುವೆ ಒಲ್ಲದ ಹುಡುಗಿಯೊಬ್ಬಳು ತನ್ನ ಪ್ರೇಮಿಗೆ ಓಡಿ ಹೋಗೋಣವೆಂದು 10 ರೂ. ನೋಟಿನಲ್ಲಿ ಪ್ರೇಮ ಸಂದೇಶ ರವಾನಿಸಿದಕ್ಕೆ ಉತ್ತರವಾಗಿ ಈಗ ಆಕೆಯ ಪ್ರೇಮಿಯಿಂದ ಉತ್ತರ ಬಂದಿದೆ. ಮದುವೆಯ ದಿನ ಬಂದು ನಿನ್ನ ಕರೆದುಕೊಂಡು ಹೋಗುತ್ತೇನೆ ಎಂದು ಆತನೂ 10 ರೂ. ನೋಟಿನಲ್ಲಿ ಬರೆದಿರುವುದು ಸದ್ಯ ವೈರಲ್ ಆಗಿದೆ.
ಏಪ್ರಿಲ್ 26ರಂದು ನನ್ನ ಮದುವೆಯಿದೆ. ನನಗೆ ಆ ಮದುವೆ ಇಷ್ಟ ಇಲ್ಲ, ನೀನು ಬಂದು ನನ್ನನ್ನು ಕರೆದುಕೊಂಡು ಹೋಗು ಎಂಬುದಾಗಿ ಕುಸುಮ್ ಎಂಬಾಕೆ 10 ರೂ. ನೋಟಿನಲ್ಲಿ ತನ್ನ ಪ್ರೇಮಿ ವಿಶಾಲ್ ಎಂಬಾತನಿಗೆ ಬರೆದ ಪ್ರೇಮ ಸಂದೇಶ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಆಕೆಯ ಮದುವೆಗೆ ಒಂದು ದಿನ ಬಾಕಿ ಇರುವಂತೆಯೇ ಆಕೆಯ ಪ್ರೇಮಿ ವಿಶಾಲ್ ಎಂಬಾತನಿಂದ ಅಂತಹುದೇ 10 ರೂ. ನೋಟಿನಲ್ಲಿ ಉತ್ತರ ಬಂದಿದ್ದು, ಮದುವೆಯ ದಿನ ನಾನು ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಬರೆದಿದ್ದಾನೆ. ಸದ್ಯ ಈ ಸಂದೇಶ ಕೂಡಾ ಸಖತ್ ವೈರಲ್ ಆಗುತ್ತಿದೆ.
ಆದರೆ, ಈ ಪ್ರತಿ ಉತ್ತರ ಬರೆದಿರುವುದು ನಿಜವಾಗಿಯೂ ಆಕೆಯ ಪ್ರೇಮಿ ವಿಶಾಲ್ ಆಗಿರಬಹುದೇ ಅಥವಾ ವಿಶಾಲ್ ಹೆಸರಿನ ಬೇರೆಯವರು ಯಾರಾದರೂ ತಮಾಷೆಗೆಂದು ಬರೆದು ವೈರಲ್ ಮಾಡಿದ್ದಾರೆಯೋ ಗೊತ್ತಿಲ್ಲ. ಏಕೆಂದರೆ ಕುಸುಮ್ ಬರೆದ ಈ ಪ್ರೇಮ ಸಂದೇಶ ವೈರಲ್ ಆಗುತ್ತಿದ್ದಂತೆ ವಿಶಾಲ್ ಹೆಸರಿನವರಿಗೆ ಟ್ಯಾಗ್ ಮಾಡುವಂತೆ ಕೋರಿ ಹಲವರು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಹಾಗಾಗಿ ವಿಶಾಲ್ ಹೆಸರಿನವರೇ ಅಥವಾ ವಿಶಾಲ್ ಎಂಬಾತನ ಹೆಸರಿನಲ್ಲಿ ಬೇರೆ ಯಾರೋ ಬರೆದು ವೈರಲ್ ಮಾಡಿರುವ ಸಾಧ್ಯತೆಯೂ ಇದೆ.