ಬೆಂಗಳೂರು, ಏ 25 (DaijiworldNews/HR): ಪಿಎಸ್ಐ ನೇಮಕಾತಿ ಅಕ್ರಮ ಕುರಿತಂತೆ ಆರೋಪ ಮಾಡಿದ್ದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಇಂದು ದಾಖಲೆ ಸಮೇತ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಪೊಲೀಸರು ನೋಟಿಸ್ ನೀಡಿದ್ದಾರೆ.
ಏಪ್ರಿಲ್ 23ರಂದು ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ತಮ್ಮ ಬಳಿಯಲ್ಲಿ ಸಾಕ್ಷ್ಯಗಳಿದ್ದಾವೆ ಎಂಬುದಾಗಿ ಶಾಸಕ ಪ್ರಿಯಾಂಕ್ ಖರ್ಗೆಯವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಈ ಹಿನ್ನಲೆಯಲ್ಲಿ ಸಿಐಡಿ ಪೊಲೀಸರು, ಇಂದು ಬೆಳಿಗ್ಗೆ 11.30ಕ್ಕೆ ಕಾರ್ಲಟನ್ ಹೌಸ್ ನ ಸಿಐಡಿ ಕಚೇರಿಗೆ ಹಾಜರಾಗಿ, ತಮ್ಮ ಬಳಿ ಇರುವ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವಂತೆ ನೋಟಿಸ್ ನೀಡಲಾಗಿದೆ.
ಮತ್ತೊಂದೆಡೆ ಪಿಎಸ್ಐ ಪರೀಕ್ಷೆ ಹಗರಣದಲ್ಲಿ ಬ್ಲೂ ಟೂತ್ ಬಳಸಿ ಅಕ್ರಮ ನಡೆಸಲು ಸಹಕಾರ ನೀಡಿದ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಮನೆಯಲ್ಲಿ 35ಕ್ಕೂ ಹೆಚ್ಚು ಹಾಲ್ ಟಿಕೆಟ್ ಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.