ಹುಬ್ಬಳ್ಳಿ, ಏ 24 (DaijiworldNews/DB): ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ರಾಜ್ಯದಲ್ಲಿ ಶಾಂತಿಭಂಗಕ್ಕೆ ಕಾರಣವಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಅಥವಾ ದೇಶದ ಇತರೆಡೆಗಳಲ್ಲಿದ್ದುಕೊಂಡು ಕೆಲವರು ವಿದೇಶೀ ವಿಳಾಸಗಳ ಮೂಲಕ ನಕಲಿ ಖಾತೆಗಳನ್ನು ಸೃಷ್ಟಿಸಿ ಸಾಮರಸ್ಯಕ್ಕೆ ಭಂಗ ಉಂಟಾಗುವ ರೀತಿಯಲ್ಲಿ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಇದರಿಂದ ಶಾಂತಿ ಭಂಗಕ್ಕೆ ಕಾರಣವಾಗುತ್ತಿದೆ. ಖಚಿತ ಮಾರ್ಗಗಳ ಮೂಲಕ ಇಂತಹವರನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕಾರಣವಾಗುತ್ತಿರುವವರು ಯಾರೇ ಆದರೂ ಬಿಡುವ ಪ್ರಶ್ನೆಯೇ ಇಲ್ಲ. ಒಳ್ಳೆಯದನ್ನು ಬಿತ್ತಲು ಸಾಮಾಜಿಕ ತಾಣಗಳು ಬಳಕೆಯಾಗಬೇಕೇ ಹೊರತು ಸಮಾಜದ ಸಾಮರಸ್ಯ ಕೆಡಿಸಲು ಅಲ್ಲ ಎಂದವರು ಇದೇ ವೇಳೆ ತಿಳಿಸಿದರು.