ಬೆಂಗಳೂರು, ಏ 24 (DaijiworldNews/DB): ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಸಲಹೆ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿಯೂ ಏರುಗತಿಯಲ್ಲಿ ಪ್ರಕರಣ ಸಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಸಲಹೆ ಮೇರೆಗೆ ಚಿಂತಿಸಲಾಗುವುದು. ಏಪ್ರಿಲ್ 27 ರಂದು ಪ್ರಧಾನಿಯವರ ವಿಡಿಯೋ ಕಾನ್ಫರೆನ್ಸ್ ಇದ್ದು, ಅವರ ಸಲಹೆಯನ್ನು ಪರಿಗಣಿಸಲಾಗುವುದು ಎಂದರು.
ರಾಜ್ಯದ ಜನರು ಕೊರೊನಾ ಬಗ್ಗೆ ನಿರ್ಲಕ್ಷ್ಯ ಮಾಡದೇ, ಹಿಂದಿನ ನಿಯಮಗಳನ್ನು ಸ್ವತಃ ಪಾಲನೆ ಮಾಡಿದರೆ ಉತ್ತಮ. ಸರ್ಕಾರ ನಿಯಮ ವಿಧಿಸುವ ತನಕ ಕಾಯಬಾರದು ಎಂದವರು ಇದೇ ವೇಳೆ ಸಲಹೆ ನೀಡಿದರು.
ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದ ವಿಚಾರವಾಗಿ ಪೂರ್ಣ ಪ್ರಮಾಣದ ತನಿಖೆಗೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ. ತನಿಖೆ ಬಳಿಕ ಇಮೇಲ್ ಬಂದಿರುವುದು ಎಲ್ಲಿಂದ ಎಂಬುದು ಗೊತ್ತಾಗಲಿದೆ ಎಂದು ಸಿಎಂ ಬೊಮ್ಮಾಯಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.