ಮುಂಬೈ, ಏ 24 (DaijiworldNews/DB): ಶಿವಸೇನೆ ಕಾರ್ಯಕರ್ತರು ಬಿಜೆಪಿ ಮಾಜಿ ಸಂಸದ ಕಿರೀಟ್ ಸೋಮೈಯ ಅವರ ಎಸ್ಯುವಿ ಕಾರಿನ ಮೇಲೆ ಚಪ್ಪಲಿ ಮತ್ತು ನೀರಿನ ಬಾಟಲಿಗಳನ್ನು ಎಸೆದ ಘಟನೆ ಶನಿವಾರ ನಡೆದಿದೆ.
ಬಾಂದ್ರಾದಲ್ಲಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ 'ಮಾತೋಶ್ರೀ' ನಿವಾಸ ಮುಂಭಾಗದಲ್ಲಿ ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಿಸಿ ಬಳಿಕ ಬಂಧನಕ್ಕೊಳಗಾದ ಮಹಾರಾಷ್ಟ್ರದ ಪಕ್ಷೇತರ ಶಾಸಕ ರವಿ ರಾಣಾ ಮತ್ತು ಪತ್ನಿ ಸಂಸದೆ ನವನೀತ್ ರಾಣಾ ಅವರನ್ನು ಠಾಣೆಯಲ್ಲಿ ಭೇಟಿಯಾಗಿ ಕಿರೀಟ್ ಸೋಮೈಯ ಹೊರಗೆ ಬರುತ್ತಿದ್ದರು. ಈ ವೇಳೆ ಠಾಣೆಯ ಮುಂಭಾಗದಲ್ಲಿ ಜಮಾಯಿಸಿದ ಶಿವಸೇನೆ ಕಾರ್ಯಕರ್ತರು ಕಿರೀಟ್ ಸೋಮೈಯ ಕಾರಿನ ಮೇಲೆ ಬಾಟಲಿ ಮತ್ತು ಚಪ್ಪಲಿಗಳನ್ನು ಎಸೆದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಘಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಿರೀಟ್ ಸೋಮೈಯ, ಶಿವಸೇನೆ ಕಾರ್ಯಕರ್ತರ ನಡೆ ಅಕ್ಷಮ್ಯ. ಅವರ ಮೇಲೆ ಕೊಲೆಯತ್ನ ಕೇಸು ದಾಖಲಿಸಬೇಕು. ಅಲ್ಲದೆ, ಘಟನೆ ನಡೆಯುವಾಗ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬಳಿಕ ಟ್ವೀಟ್ ಮಾಡಿರುವ ಅವರು, ಶಿವಸೇನೆಯ 70ರಿಂದ 80 ಗೂಂಡಾಗಳು ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ. ಈ ಸಂಬಂಧ ದೂರು ನೀಡಲು ತೆರಳಿದರೆ ಮುಂಬೈ ಪೊಲೀಸರು ದೂರು ಪಡೆದುಕೊಳ್ಳಲು, ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ.