ಜಮ್ಮು ಕಾಶ್ಮೀರ, ಏ 24 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರು ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದು, ಅವರು ಪಾಲ್ಗೊಳ್ಳುವ ರ್ಯಾಲಿ ಸ್ಥಳದಿಂದ 12 ಕಿಮೀ ದೂರದಲ್ಲಿ ಸ್ಫೋಟ ಸಂಭವಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿಯವರು ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ಭೇಟಿಗೂ ಮುನ್ನ ಮೂರ್ನಾಲ್ಕು ದಿನಗಳಿಂದ ಉಗ್ರರ ಉಪಟಳ ಜಮ್ಮು ಕಾಶ್ಮೀರದಲ್ಲಿ ಹೆಚ್ಚುತ್ತಿದೆ. ಇದರಿಂದಾಗಿ ಎಲ್ಲೆಡೆ ಭದ್ರತೆ ಹೆಚ್ಚಿಸಲಾಗಿದೆ. ಈ ನಡುವೆ ಪ್ರಧಾನಿ ಪಾಲ್ಗೊಳ್ಳಬೇಕಿದ್ದ ರ್ಯಾಲಿ ಸ್ಥಳದಿಂದ ಕೇವಲ 12 ಕಿಮೀ ದೂರದಲ್ಲಿ ಭಾನುವಾರ ಬೆಳಗ್ಗೆ ಸ್ಫೋಟ ಸಂಭವಿಸಿದೆ ಎಂದು ವರದಿಯಗಾಗಿದೆ. ಜಮ್ಮುವಿನ ಬಿಷ್ನಾಹ್ನ ಲಾಲಿಯನ್ ಗ್ರಾಮದ ಬಯಲು ಪ್ರದೇಶದಲ್ಲಿ ಈ ಸ್ಪೋಟ ಸಂಭವಿಸಿದೆ ಎನ್ನಲಾಗಿದೆ.
ಜಮ್ಮು ಕಾಶ್ಮೀರ ಪೊಲೀಸರು, ಭದ್ರತಾ ಪಡೆಗಳು ಸ್ಪೋಟ ಸಂಭವಿಸಿದ ಸ್ಥಳಕ್ಕೆ ತತ್ಕ್ಷಣ ತೆರಳಿದ್ದು, ಭದ್ರತೆ ಬಗ್ಗೆ ಪರಿಶೀಲಿಸುತ್ತಿದ್ದಾರೆ.