ನವದೆಹಲಿ, ಏ 24 (DaijiworldNews/DB): ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಪ್ರದೇಶಗಳೆರಡರ ನಡುವೆ ಸರ್ವಋತು ಸಂಪರ್ಕ ಸ್ಥಾಪಿಸಲು ಬನಿಹಾಲ್-ಖಾಜಿಗುಂಡ್ ರಸ್ತೆ ಸುರಂಗ ಮಾರ್ಗವನ್ನು ತೆರೆಯುವುದು ಸೇರಿದಂತೆ ಒಟ್ಟು 20,000 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿಯವರು ನೆರವೇರಿಸಲಿದ್ದಾರೆ.
ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ದೇಶದ ಎಲ್ಲಾ ಗ್ರಾಮ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಾಂಬಾ ಜಿಲ್ಲೆಯ ಪಲ್ಲಿ ಪಂಚಾಯತ್ಗೆ ಭೇಟಿ ನೀಡಲಿದ್ದಾರೆ. ಅಲ್ಲದೆ 'ಅಮೃತ ಸರೋವರ' ಎಂಬ ಹೊಸ ಉಪಕ್ರಮ ಪ್ರಾರಂಭಕ್ಕೆ ಚಾಲನೆ ನೀಡಲಿದ್ದು, ಇದು ದೇಶದ ಪ್ರತಿ ಜಿಲ್ಲೆಯಲ್ಲಿ 75 ಜಲಮೂಲಗಳನ್ನು ಅಭಿವೃದ್ಧಿಪಸುವಿಕೆ ಮತ್ತು ಪುನರುಜ್ಜೀವನಕ್ಕೆ ಇರುವ ಕಾರ್ಯಕ್ರಮವಾಗಿದೆ ಎಂದು ಪಿಎಂಒ ಕಚೇರಿ ಮೂಲಗಳು ತಿಳಿಸಿವೆ.
370ನೇ ವಿಧಿ ರದ್ದತಿ ಬಳಿಕ ಮೊದಲ ಬಾರಿಗೆ ಪ್ರಧಾನಿಯವರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಭಾರೀ ಭದ್ರತೆ ಕಲ್ಪಿಸಲಾಗಿದೆ. ಎಲ್ಲಾ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ತಾಣಗಳಲ್ಲಿ ಬಹು-ಪದರದ ಚೆಕ್ ಪಾಯಿಂಟ್ಗಳನ್ನು ಅಳವಡಿಸಲಾಗಿದೆ. ಅಲ್ಲದೆ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ರ್ಯಾಲಿ ನಡೆಯುವ ಸ್ಥಳದಲ್ಲಿ ವೈಮಾನಿಕ ಕಣ್ಗಾವಲು ಗ್ರಿಡ್, ಡ್ರೋನ್ಗಳು ಮತ್ತು ಶಾರ್ಪ್ಶೂಟರ್ಗಳನ್ನು ಇರಿಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮೂರು ದಿನಗಳಿಂದ ಉಗ್ರರ ಚಟುವಟಿಕೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಹಠಾತ್ ಏರಿಕೆ ಕಂಡ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.