ನವದೆಹಲಿ, ಏ 23 (DaijiworldNews/DB): ಸುಮನ್ ಕೆ. ಬೆರಿ ಅವರನ್ನು ನೀತಿ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಉಪಾಧ್ಯಕ್ಷರಾಗಿದ್ದ ರಾಜೀವ್ ಕುಮಾರ್ ಅವರ ಹಠಾತ್ ರಾಜೀನಾಮೆ ಬಳಿಕ ಸುಮನ್ ನೇಮಕ ನಡೆದಿದೆ.
ಸುಮನ್ ಕೆ. ಬೆರಿ ಅವರು ದೆಹಲಿಯ ರಾಷ್ಟ್ರೀಯ ಅನ್ವಯಿಕ ಅರ್ಥಶಾಸ್ತ್ರ ಸಂಶೋಧನಾ ಮಂಡಳಿಯಲ್ಲಿ (ಎನ್ಸಿಎಇಆರ್) ಪ್ರಧಾನ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಧಾನಿ ಆರ್ಥಿಕ ಸಲಹಾ ಸಮಿತಿ, ಸಾಂಖ್ಯಿಕ ಸಮಿತಿ ಮತ್ತು ಆರ್ಬಿಐನ ಹಣಕಾಸು ನೀತಿಯ ತಾಂತ್ರಿಕ ಸಲಹಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಅನುಭವ ಅವರಿಗಿದೆ. ಅವರು ಮೇ 1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಕುಮಾರ್ ಅವರ ಸೇವಾ ಅವಧಿಯು ಏಪ್ರಿಲ್ 30ರಂದು ಅಂತ್ಯವಾಗಲಿತ್ತು. ಆದರೆ, ಸೇವಾ ಅವಧಿ ಕೊನೆಗೊಳ್ಳುವುದಕ್ಕೆ ಒಂದು ವಾರ ಬಾಕಿ ಇರುವಾಗಲೇ ಹಠಾತ್ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ವರದಿಗಳು ತಿಳಿಸಿವೆ. ದೇಶದ ಪ್ರಮುಖ ಅರ್ಥಶಾಸ್ತ್ರಜ್ಞರಲ್ಲಿ ರಾಜೀವ್ ಕುಮಾರ್ ಒಬ್ಬರು. ಅವರು 2017ರ ಆಗಸ್ಟ್ನಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದರು.