ಬೆಂಗಳೂರು, ಏ 23 (DaijiworldNews/HR): ಕಾಂಗ್ರೆಸ್ನ ಸಂಸ್ಕೃತಿಯೇ ಎಲ್ಲೆಡೆ ಅಶಾಂತಿ ನಿರ್ಮಾಣ ಮಾಡುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಜೆ ಹಳ್ಳಿ-ಕೆಜಿಹಳ್ಳಿಯಲ್ಲೂ ಅವರದೇ ಪಕ್ಷದ ಶಾಸಕನ ಮನೆಯನ್ನು, ಅವರದೇ ಪಕ್ಷದ ಮಾಜಿ ಮೇಯರ್ ಬೆಂಕಿ ಹಾಕಿಸಿ, ಜೈಲಿಗೆ ಹೋಗಿದ್ದ. ಹುಬ್ಬಳ್ಳಿ ಗಲಾಟೆಯಲ್ಲೂ ಸ್ಥಳೀಯ ಕಾಂಗ್ರೆಸ್ ಅಧ್ಯಕ್ಷನೇ ಭಾಗಿಯಾಗಿದ್ದಾನೆ. ಪಿಎಸ್ಐ ನೇಮಕಾತಿ ಹಗರಣದಲ್ಲೂ ಕಾಂಗ್ರೆಸ್ ಮುಖಂಡನೇ ಇದ್ದಾನೆ. ಹೀಗೆ ಅವರೇ ಎಲ್ಲ ಹಗರಣದಲ್ಲೂ ಭಾಗಿಯಾಗಿ ಉಳಿದವರ ಬಗ್ಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕರ್ನಾಟಕದಲ್ಲಿ ಅಶಾಂತಿ, ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಸರ್ವಪ್ರಯತ್ನ ಮಾಡುತ್ತಿದ್ದು, ವಿದೇಶಿ ಶಕ್ತಿಗಳು ಈ ಎಲ್ಲ ಘಟನೆಯಲ್ಲಿ ಭಾಗಿಯಾಗಿದೆಯೇ ಎನ್ನುವ ಬಗ್ಗೆ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.