ಮುಂಬೈ, ಏ 23 (DaijiworldNews/DB): ಮುಂಬೈಯ ಫಿಟ್ನೆಸ್ ಮಾಡೆಲ್ವೊಬ್ಬರು ಮಧ್ಯ ವಯಸ್ಸಿನಲ್ಲಿಯೂ ಎಳೆ ವಯಸ್ಸಿನ ಉತ್ಸಾಹದಿಂದ ಕ್ರಿಯಾಶೀಲರಾಗಿ ಸುದ್ದಿಯಾಗಿದ್ದಾರೆ. ಕರಾಟೆ, ಯೋಗ, ಮಾಡೆಲಿಂಗ್, ಬಾಡಿ ಬಿಲ್ಡಿಂಗ್ಗೂ ಸೈ ಎನಿಸಿಕೊಂಡ ಇವರು ಬಿಕಿನಿ ತೊಟ್ಟು ಫೀಲ್ಡಿಗಿಳಿದರೆ ಹರೆಯದ ಹುಡುಗಿಯರೇ ನಾಚಬೇಕು!
ಹೌದು. ಇವರು 55 ವರ್ಷ ವಯಸ್ಸಿನ ಮುಂಬೈ ಮೂಲದ ನಿಶ್ರೀನ್ ಪಾರಿಖ್. ಫಿಟ್ನೆಸ್ ಮಾಡೆಲ್ ಆಗಿರುವ ಇವರು ಕರಾಟೆಯಲ್ಲಿ ಬ್ಲಾಕ್ಬೆಲ್ಟ್. ಪ್ರಮಾಣಿತ ಯೋಗ ಮತ್ತು ಪೈಲಟ್ ತರಬೇತುದಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವೆಡೆ ಬಾಡಿಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಮಧ್ಯ ವಯಸ್ಸಿನಲ್ಲಿ ಬಿಕಿನಿ ತೊಟ್ಟು ಮೈಯಲ್ಲಿ ಟ್ಯಾಟೂ ಹಾಕಿಕೊಂಡು ರ್ಯಾಂಪ್ ವಾಕ್ ಮಾಡುವುದು ಸಾಮಾನ್ಯದ ಕೆಲಸವಲ್ಲ. ಆದರೆ ನಿಶ್ರೀನ್ ಯಾವುದೇ ಅಂಜಿಕೆಯಿಲ್ಲದೆ ಯುವ ಸ್ಪರ್ಧಿಗಳಿಗೆ ಕಠಿನ ಸ್ಪರ್ಧೆಯೊಡ್ಡುತ್ತಾರೆ. ಆಕೆಯ ರ್ಯಾಂಪ್ ವಾಕ್ಗೆ ಮನಸೋಲದವರಿಲ್ಲ. ನಿಶ್ರೀನ್ರ ಈ ವಯಸ್ಸಿನ ಉತ್ಸಾಹ ಮತ್ತು ದೇಹದ ಫಿಟ್ನೆಸ್ನ್ನು ಕಾಪಾಡಿಕೊಂಡ ಹಿಂದಿನ ಸೀಕ್ರೆಟ್ ಎಂದರೆ ಆರೋಗ್ಯಕರ ಮತ್ತು ಶಿಸ್ತಿನ ಜೀವನಶೈಲಿಯಂತೆ.
ನಿಶ್ರೀನ್ ತಮ್ಮ ಬಾಲ್ಯದ ದಿನಗಳ ಬಗ್ಗೆ ಮಾತಾನಾಡುತ್ತಾ, ಮುಂಬೈನಲ್ಲಿ ಹುಟ್ಟಿ ಬೆಳೆದ ನಾನು 1982ರಲ್ಲಿ ಅಂದರೆ 15ನೇ ವಯಸ್ಸಿನಲ್ಲಿ ಕರಾಟೆ ಕಲಿಕೆ ಆರಂಭಿಸಿದೆ. ಇದೇ ವಯಸ್ಸಿನಲ್ಲಿ ಬೈಕ್ ರೈಡ್ ಮಾಡುವ ಆಸಕ್ತಿಯೂ ಬೆಳೆದಿತ್ತು. ಬಳಿಕ ತಂದೆ ಬೈಕ್ ಉಡುಗೊರೆ ನೀಡಿದರು ಎಂದು ನೆನಪಿಸುತ್ತಾರೆ.
ಹರೆಯದ ವಯಸ್ಸಿನಲ್ಲಿ ಒಮ್ಮೆ ಮುಂಬೈನ ಆಝಾದ್ ಮೈದಾನದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೆಲವು ಹುಡುಗರು ಆಕೆಯನ್ನು ಚುಡಾಯಿಸಿದ್ದರಿಂದ ಜಗಳ ಶುರುವಾಯಿತು. ಜಗಳವು ಪೆಟ್ಟಿನ ಹಂತದವರೆಗೂ ಬಂದಿತ್ತು. ಇದರಲ್ಲಿ ಹುಡುಗರೊಂದಿಗೆ ಪೆಟ್ಟು ಮಾಡಿ ಆಕೆ ಗೆದ್ದಿದ್ದರಂತೆ.
ಅವರ ಕಠಿಣ ಪರಿಶ್ರಮದಿಂದಾಗಿ ಅಖಿಲ ಭಾರತ ಕರಾಟೆ ಫೆಡರೇಶನ್ 1989ರಲ್ಲಿ ಆಯೋಜಿಸಿದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಪದಕ ಗೆಲ್ಲುವಂತೆ ಮಾಡಿತ್ತು. ವರ್ಷದ ಉತ್ತಮ ಪರ್ಸನಲ್ ಟ್ರೈನರ್ ಪ್ರಶಸ್ತಿ, ಎಟಿಪಿ ಅವಾರ್ಡ್ ಫಾರ್ ಎಕ್ಸೆಲೆನ್ಸ್, ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಬಳಿಕ ಕರಾಟೆ ತರಗತಿಗಳಲ್ಲಿ ಭೇಟಿಯಾಗಿದ್ದ ವ್ಯಕ್ತಿಯೋರ್ವರೊಂದಿಗೆ ಮದುವೆಯಾಗಿ ಇಬ್ಬರು ಮಕ್ಕಳನ್ನು ಪಡೆದರು. ಆದರೆ ಇವ್ಯಾವುದೂ ಅವರ ನಿತ್ಯದ ಕೆಲಸಕ್ಕೆ ತೊಂದರೆ ಉಂಟು ಮಾಡಲಿಲ್ಲ. ಈ ನಡುವೆ ಅರೆಬಿಕ್ ಕಲಿಕೆಯನ್ನೂ ಮಕ್ಕಳಿಗೆ ಹೇಳಿಕೊಡುತ್ತಿದ್ದರು.
ಸಮಯವನ್ನು ಹಾಳು ಮಾಡಲಿಚ್ಚಿಸದ ನಿಶ್ರೀನ್, ಮುಂಬೈಯ ಕೈವಲ್ಯಧರ್ಮ ಸಂಸ್ಥೆಯಿಂದ ಒಂದು ವರ್ಷದ ಪಿಜಿ ಡಿಪ್ಲೊಮಾ ಕೋರ್ಸ್ನ್ನು ಕೂಡಾ ಪೂರ್ಣಗೊಳಿಸಿದ್ದಾರೆ. ಬಳಿಕ ಯೋಗ ಕಲಿಕೆ ಪೂರ್ಣಗೊಳಿಸಿ ತಮ್ಮಹದಿನೆಂಟು ವರ್ಷಗಳಿಂದ ಯೋಗ ತರಬೇತಿಯನ್ನೂ ನಡೆಸುತ್ತಿದ್ದಾರೆ.
ನಿಶ್ರೀನ್ ಅವರ 48ನೇ ವರ್ಷದಲ್ಲಿ ಅವರು ಗರ್ಭಕೋಶದ ಸಮಸ್ಯೆಯಿಂದ ಗರ್ಭಕೋಶವನ್ನೇ ತೆಗೆಸಬೇಕಾಗಿ ಬಂದಿರುವುದು ಅವರ ಬದುಕಿಗೆ ಸಿಕ್ಕ ಮಹತ್ವದ ತಿರುವಾಗಿತ್ತು. ಶೀಘ್ರ ಈ ಸಮಸ್ಯೆಯಿಂದ ಹೊರಬಂದು ಮಕ್ಕಳ ಪ್ರೋತ್ಸಾಹದಿಂದ ಮತ್ತೆ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಮಹಾರಾಷ್ಟ್ರದಲ್ಲಿ ನಡೆದ ಮುಕ್ತ ಬಾಡಿಬಿಲ್ಡಿಂಗ್ ಸ್ಪರ್ಧೆ ವಿಭಾಗದಲ್ಲಿ ಬಿಕಿನಿ ತೊಟ್ಟು ಪಾಲ್ಗೊಂಡಾಗ ಎಲ್ಲರಿಂದಲೂ "ವ್ಹಾವ್ಹ್’ ಎಂಬ ಉದ್ಘಾರ ಬಂದಿತ್ತು ಎನ್ನುವ ಅವರು, ನನಗೆ ಅತ್ಯುತ್ತಮ ದೇಹವಿದೆ, ಅದಕ್ಕೆ ತಕ್ಕಂತೆ ಸ್ಪರ್ಧೆಯಲ್ಲಿ ಭಾಗವಹಿಸುವ ಧೈರ್ಯವಿದೆ ಎನ್ನುತ್ತಾರೆ. ಮಿಸ್ ಇಂಡಿಯಾ ಏಶಿಯನ್ ಚಾಂಪಿಯನ್ಶಿಪ್ನಲ್ಲೂ ಭಾಗವಹಿಸಿದ್ದಾರೆ. ಮಾಡೆಲ್ ಫಿಸಿಕ್ ಅತ್ಲೆಟ್ ಆಗಿ ಥೈಲಾಂಡ್ನಲ್ಲಿ ನಡೆದ ನಾಲ್ಕನೇ ಅಂತಾರಾಷ್ಟ್ರೀಯ ವಿಶ್ವ ಬಾಡಿಬಿಲ್ಡಿಂಗ್ ಮತ್ತು ಫಿಸಿಕ್ ಫೆಡರೇಶನ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯವಾಗಿಯೂ ಅವರು ಗುರುತಿಸಲ್ಪಟ್ಟರು.
ಪ್ರೊಟೀನ್ ಶೇಕ್ ಕುಡಿಯುವುದರ ಮೂಲಕ ದಿನವನ್ನು ಆರಂಭಿಸುವ ಅವರು ಬಳಿಕ ದೈನಂದಿನ ವರ್ಕೌಟ್ನಲ್ಲಿ ತೊಡಗುತ್ತಾರೆ. ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಗರ್ಭಕೋಶ ಶಸ್ತ್ರಚಿಕಿತ್ಸೆಯಿಂದಾದ ಗಾಯ ಇನ್ನೂ ಆಕೆಯ ಹೊಟ್ಟೆಯ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಅದನ್ನು ಮರೆಮಾಚುವ ಪ್ರಯತ್ನವನ್ನು ಮಾಡಿಲ್ಲ. ನೈಸರ್ಗಿಕ ಶರೀರವನ್ನು ತೋರಿಸಲು ಮುಜುಗರವೇಕೆ ಎಂದು ಅವರೇ ಪ್ರಶ್ನಿಸುತ್ತಾರೆ.